ಚಿಂತಾಮಣಿಯ ನೆಕ್ಕುಂದಿ ಅಗ್ರಹಾರದಲ್ಲಿವೆ ವಿಶಿಷ್ಟ ವೀರಗಲ್ಲು

FotoJet (2)
Published on

ಯುದ್ಧದ ಪರಾಕ್ರಮದ ಸಂಕೇತದಂತಿರುವ ಚಿತ್ರಗಳು ನಗರಸಭೆ ಮಾಜಿ ಸದಸ್ಯರಿಂದ ರಕ್ಷಣೆಗೆ ಕ್ರಮ

ಚಿಂತಾಮಣಿ: ನಗರದ ನೆಕ್ಕುಂದಿ ಅಗ್ರಹಾರದಲ್ಲಿ ಇತಿಹಾಸ ಸಾರುವ ಮೂರು ವೀರಗಲ್ಲುಗಳಿದ್ದು, ಇದರಲ್ಲಿ ಒಂದು ವಿಶಿಷ್ಟವಾಗಿದೆ. ಕಲ್ಲಿನಲ್ಲಿರುವ ಕಂಡುಬರುವ ಚಿತ್ರಗಳು ಯುದ್ಧದ ಪರಾಕ್ರಮದ ಸಂಕೇತದಂತೆ ತೋರುತ್ತದೆ.

ಈ ಮೂರು ವೀರಗಲ್ಲುಗಳಲ್ಲಿಯೂ ಹೋರಾಟದ ವಿವಿಧ ಚಿತ್ರಣಗಳನ್ನು ಕಾಣಬಹುದು. ಒಂದು ಕೈಯಲ್ಲಿ ಕತ್ತಿ ಮತ್ತು ಗುರಾಣಿ, ಒಂದು ಕೈಯಲ್ಲಿ ಬಿಲ್ಲು ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದ ಚಿತ್ರಗಳು, ಸುತ್ತಲೂ ಕುದುರೆ ಏರಿ ಯುದ್ಧ ಮಾಡುತ್ತಿರುವುದು, ನೆಲದಲ್ಲಿ ನಿಂತು ಆಯುಧ ಹಿಡಿದು ಯುದ್ಧ ಮಾಡುತ್ತಿರುವುದನ್ನು ಚಿತ್ರಿಸಲಾಗಿದೆ.

ಹಲವು ಕಲ್ಲಿನಲ್ಲಿ ಕಾಣಿಸುವ ಚಿತ್ರಗಳಲ್ಲಿ ವೀರರು ಕತ್ತಿ ಮತ್ತು ಗುರಾಣಿ ಹಿಡಿದಿದ್ದಾರೆ, ಮಹಿಳೆಯರು ಬಿಲ್ಲು ಬಾಣ ಮತ್ತು ಕತ್ತಿ ಹಿಡಿದ ಚಿತ್ರಗಳನ್ನೂ ಚಿತ್ರಿಸಲಾಗಿದೆ. ಇದೇ ಬಂಡೆಯಲ್ಲಿ ರಾಜನ ಪಕ್ಕದಲ್ಲಿ ಅಪ್ಸರೆಯರು ನಿಂತಿರುವ ಚಿತ್ರಗಳಿವೆ.

ಚಿಂತಾಮಣಿ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡ ಭಾಗವೇ ನೆಕ್ಕುಂದಿನಾಡು. ಇದರ ಬಗ್ಗೆ ಹೊಸಕೋಟೆಯ ಕೊಂಡರಹಳ್ಳಿಯ ಶಾಸನದಲ್ಲಿ ಉಲ್ಲೇಖವಿದೆ. ನಂದಿಗೂಳಿಯ ಗಾವುಂಡನೇ ಕೈವಾರದ ಜತೆಗೆ ಈ ನಾಡನ್ನು ಆಳುತ್ತಿದ್ದನೆಂದು ಇತಿಹಾಸ ಶಾಸನ ತಜ್ಞರು ಹೇಳುತ್ತಾರೆ. ಅಲ್ಲದೆ, ಚಿಂತಾಮಣಿ ತಾಲೂಕಿನ ನೆಕ್ಕುಂದಿಯಲ್ಲಿರುವ ವೀರಗಲ್ಲುಗಳಲ್ಲಿ ಕುನ್ದಯ್ಯ ಎಂಬ ಹೆಸರು ಉಲ್ಲೇಖಿತಗೊಂಡಿದೆ. ಇವರು ನೊಳಂಬರಸ ಮಹೇಂದ್ರನ ಕೈಕೆಳಗಿನ ಅಧಿಕಾರಿಯಾಗಿ ನೆಕ್ಕುಂದಿ ನಾಡನ್ನು ಆಳ್ವಿಕೆ ಮಾಡುತ್ತಿರುತಾರೆ ಎಂದು ಉಲ್ಲೇಖವಿದೆ ಎಂದು ಶಾಸನ ತಜ್ಞರು ಹೇಳುತ್ತಾರೆ.

ನೊಳಂಬರ ಆಡಳಿತ ಅಧಿಕಾರಿಗಳಾಗಿ ಮಾಂಡಲೀಕರು, ಸಾಮಂತರು, ದಂಡನಾಯಕರು, ಪೆಗ್ಗರ್ಡೆಗಳು, ಗಾವುಂಡರು, ಯತಿಗಳು ಹೀಗೆ ಎಲ್ಲರೂ ರಾಜಕೀಯದ ಜತೆಗೆ ಆಡಳಿತಾತ್ಮಕ ಚಟುವಟಿಕೆಗಳನ್ನೂ ನಿರ್ವಹಣೆ ಮಾಡುತ್ತಿದ್ದರು. ನೊಳಂಬರು ಪ್ರಾರಂಭದಲ್ಲಿ ಗಂಗರಸರು, ರಾಷ್ಟ್ರಕೂಟರ ಸಾಮಂತರಾಗಿದ್ದರು ಕಾಲಕ್ರಮೇಣ ಗಂಗರಸರ ಜತೆ ಬೆಳೆದು ರಾಜಕೀಯವಾಗಿ ಪ್ರಬಲರಾಗಿದ್ದರು. ನೊಳಂಬರಸರ ಶಾಸನಗಳಲ್ಲಿ ಉಲ್ಲೇಖಗೊಂಡಂತಹ ಅಧಿಕಾರಿಗಳಲ್ಲಿ ಚಿಂತಾಮಣಿಯ ನೆಕ್ಕುಂದಿಯಲ್ಲಿರುವ ವೀರಗಲ್ಲುಗಳ ಶಾಸನದಲ್ಲಿ ಮಹೇಂದ್ರ ಮತ್ತು ಕುನ್ದಯ್ಯ ಎಂಬ ಹೆಸರುಗಳು ಇವೆ ಎನ್ನುತ್ತಾರೆ ಶಾಸನ ತಜ್ಞರು.

ಸಹಕಾರಕ್ಕೆ ಮನವಿ

ಚಿಂತಾಮಣಿಯ ನೆಕ್ಕುಂದಿ ಅಗ್ರಹಾರದಲ್ಲಿರುವ ಪುರಾತನ ವೀರಗಲ್ಲುಗಳು ದಿನೇದಿನೆ ಅವಸಾನದ ಹಂತ ತಲುಪುತ್ತಿದ್ದು, ಇವುಗಳ ರಕ್ಷಣೆಗೆ ನಗರಸಭೆ ಮಾಜಿ ಸದಸ್ಯ ಟಿ. ಶ್ರೀನಿವಾಸ್ ಮುಂದಾಗಿದ್ದು, ಇತರರು ಸಹಕಾರ ನೀಡುವಂತೆ ಕೋರಿದ್ದಾರೆ. ಹಿಂದೆ ನಮ್ಮ ಹಿರಿಯರು ಸದರಿ ವೀರಗಲ್ಲುಗಳಿಗೆ ಪೂಜೆ ಮಾಡುತ್ತಿದ್ದರು. ದಿನಗಳು ಕಳೆದಂತೆ ಪೂಜೆ ಮಾಡುವುದನ್ನು ನಿಲ್ಲಿಸಿರುವುದರಿಂದ ಗಿಡಗಂಟಿ ಬೆಳೆದು ವೀರಗಲ್ಲುಗಳು ಕಾಣದಂತೆ ಆಗಿವೆ. ಸುತ್ತಲೂ ಸ್ವಚ್ಛತೆ ಮಾಡಿ, ವೀರಗಲ್ಲುಗಳನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ತಗಡಿನ ಶೀಟ್ ಅಳವಡಿಸಿ, ಕಲ್ಲುಗಳ ಸುತ್ತಲೂ ಕಾಂಕ್ರೀಟ್ ಅಳವಡಿಸಲಾಗುವುದು. ಜತೆಗೆ ರಸ್ತೆ ನಿರ್ಮಾಣ ಮಾಡಿ ಈ ವೀರಗಲ್ಲುಗಳಿಗೆ ಪೂಜೆ ನೆರವೇರುವಂತೆ ಮಾಡಬೇಕಾಗಿದೆ. ಅದಕ್ಕೆ ಜನ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net