ತಮಿಳುನಾಡಿಗೆ ನೀರು ಬಿಟ್ಟು ರಾಜ್ಯಸರ್ಕಾರದ ನಾಟಕ: ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ

Chintaka Chakraborty Sulibele supports Cauvery protest
Published on

ಮಂಡ್ಯ: ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಸಖ್ಯೆ ಬೆಳೆಸಿಕೊಂಡು ರಾಜಕೀಯ ಕಾರಣಕ್ಕಾಗಿ ಕಾವೇರಿ ನೀರನ್ನು ಬಿಡುಗಡೆ ಮಾಡಿ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ರಾಜ್ಯ ಸರ್ಕಾರ ನಾಟಕವಾಡುತ್ತಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಶುಕ್ರವಾರ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುದ್ದ ಕಾವೇರಿ ಹೋರಾಟದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅಥವಾ ಪ್ರಾಧಿಕಾರ ಹೇಳಿದೇ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ವಿಚಾರವಾಗಿ ವಿವಾದ ಉಂಟಾಗಿದೆ. ಕಾವೇರಿ ಪ್ರಾಧಿಕಾರ ನೀರು ಬಿಡುವಂತೆ ಆದೇಶ ನೀಡಿತ್ತು. ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ ಎಂಬ ಕಾರಣಕ್ಕೆ ತಮಿಳುನಾಡು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಆದೇಶ ನೀಡುವ ಮುನ್ನವೇ ನೀರು ಬಿಟ್ಟಿದೆ. ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಘರ್ಷಣೆ ತಲೆದೋರುತ್ತಿತ್ತು. ಆಗ ಪ್ರಧಾನಿ ಅಥವಾ ಕೇಂದ್ರ ಸರ್ಕಾರ ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕಿತ್ತು. ಅವರು ನೀರು ಕೇಳಿದರು, ನೀವು ಕೊಟ್ಟಿರಿ ಎಂದು ವಿವರಿಸಿದರು.

ರಾಜ್ಯದ ಸಂಸದರೂ ಸಹ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದರೆ ಪ್ರಧಾನಿ ಬಳಿ ಹೋಗಿ ಏನೆಂದು ಕೇಳಲು ಸಾಧ್ಯ?. ಕರ್ನಾಟಕದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ಕೇಳದೆಯೇ ನೀರು ಹರಿಸಿದ್ದಾರೆ. ಹೀಗಿರುವಾಗ ನಾನು ಹೇಗೆ ಮಧ್ಯ ಪ್ರವೇಶಿಸಲಿ ಎಂದು ಪ್ರಧಾನಿ ಪ್ರಶ್ನಿಸುತ್ತಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಸದರಾದರೂ ಏನು ಮಾಡಲು ಸಾಧ್ಯ ಎಂದ ಅವರು, ನೀರು ಬಿಡುವ ಮುನ್ನವೇ ಇಂತಹ ಚಿಂತನೆ ಮಾಡಬೇಕಿತ್ತು. ನೀರು ಬಿಟ್ಟು ಈಗ ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿ ನಡೆದಿದೆ. ಕಾವೇರಿ ನೀರು ಹಳೇ ಮೈಸೂರು ಅಥವಾ ಬೆಂಗಳೂರು ಭಾಗಕ್ಕೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೆ ಸೇರಿದ್ದು ಎಂಬ ಸಂದೇಶವನ್ನು ಬಂದ್ ಮಾಡುವ ಮೂಲಕ ಈಗ ರಾಜ್ಯ ಸರ್ಕಾರಕ್ಕೆ ಚಾಟಿ ಬಿಸಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಜನಹಿತವನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಹಿತಾಸಕ್ತಿಗಾಗಿ ತಮಿಳುನಾಡಿಗೆ ನೀರು ಬಿಟ್ಟಿದೆ, ಒಂದು ವೇಳೆ ಚೀನಾ ಅಥವಾ ಪಾಕಿಸ್ತಾನದೊಂದಿಗೆ ರಾಜಕೀಯ ಹಿತಾಸಕ್ತಿ ಬೆಳೆಸಿಕೊಂಡರೆ ಅಲ್ಲಿಗೂ ನೀರು ಹರಿಸುವುದರಲ್ಲಿ ಸಂದೇಹವಿಲ್ಲ. ಕಾಂಗ್ರೆಸ್ ಬೇಕಾದರೆ ತಮಿಳುನಾಡಿನೊಂದಿಗೆ ಸ್ನೇಹ ಮಾಡಿಕೊಳ್ಳಿ. ಆದರೆ ನಮ್ಮ ಜನರನ್ನು, ರೈತರನ್ನು ಏಕೆ ಬಲಿ ಕೊಡುತ್ತೀರಿ. ಇನ್ನಾದರೂ ರಾಜ್ಯದ ನೆಲ, ಜಲವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net