ಚಿನ್ನಸಮುದ್ರ- ಸಿರಿಗೆರೆ ಸಂಪರ್ಕ ಕಡಿತ

Chinnasamudra, Sirigere, disconnection,
Published on

ಮಾಯಕೊಂಡ: ಸೋಮವಾರ ಸುರಿದ ಭಾರಿ ಮಳೆಗೆ ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ, ಲೋಕಿಕೆರೆ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ಬೆಳೆಗಳು ಹಾನಿಗೊಂಡಿವೆ. 6 ಮನೆಗಳು ಭಾಗಶಃ ಕುಸಿದು ಬಿದ್ದಿವೆ.

ಜಮೀನುಗಳಲ್ಲಿ ನೀರು ನಿಂತು ಕಟಾವಿಗೆ ಬಂದ ಮೆಕ್ಕೆಜೋಳ ಫಸಲು ನೆಲಕಚ್ಚಿದೆ. ಹೆದ್ನೆ, ಐಗೂರು ತಲಾ 1, ಮಾಯಕೊಂಡ, ಹುಚ್ಚವ್ವನಹಳ್ಳಿ ತಲಾ 2 ಮನೆಗಳು ಭಾಗಶಃ ಕುಸಿದು ಬಿದ್ದಿವೆ.

ಮಾಯಕೊಂಡ, ದಿಂಡದಹಳ್ಳಿ, ಅಣ್ಣಾಪುರ, ಗುಡಾಳು ಮತ್ತಿತರ ಗ್ರಾಮಗಳ ಹಳ್ಳಗಳು ತುಂಬಿ ಹರಿಯುತ್ತಿವೆ. ನರಗನಹಳ್ಳಿ ಕೆರೆ ಮತ್ತು ಮಾಯಕೊಂಡ ಹೊಸಕೆರೆ ಕೋಡಿ ಬಿದ್ದಿದ್ದು, ಹಳ್ಳದ ಮೂಲಕ ನೀರು ಹರಿಯುತ್ತಿದೆ.

ಚಿನ್ನಸಮುದ್ರ ಗ್ರಾಮದ ಸಮೀಪದ ಹಳ್ಳ ತುಂಬಿ ಹರಿಯುತ್ತಿದ್ದು, ಚಿನ್ನಸಮುದ್ರ- ಸಿರಿಗೆರೆ ಮಾರ್ಗದ ರಸ್ತೆ ಸಂಪರ್ಕ ಸೋಮವಾರ ಸಂಜೆವರೆಗೂ ಕಡಿತಗೊಂಡಿತ್ತು. ಕುರ್ಕಿ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.

ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ: ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಮೆಕ್ಕೆಜೋಳ, ಹಿಂಗಾರು ರಾಗಿ, ಅಲಸಂದೆ, ತೊಗರಿ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ. ಆದ್ದರಿಂದ ಜಿಲ್ಲಾಡಳಿತ ಕೃಷಿ, ಕಂದಾಯ ಅಧಿಕಾರಿಗಳ ಮೂಲಕ ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net