ಭತ್ತ ನಾಟಿ ಮಾಡಿ ಸಂಭ್ರಮಿಸಿದ ಚಿಣ್ಣರು

12 RPT 1
ಭತ್ತದ ಸಸಿ ನಾಟಿ ಮಾಡುತ್ತಿರುವ ಕಾರೆಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.
Published on

ರಿಪ್ಪನ್‌ಪೇಟೆ: ಪಠ್ಯ ಚಟುವಟಿಕೆಯಲ್ಲಿ ಸದಾ ತೊಡಗಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಶನಿವಾರ ಭತ್ತದ ಸಸಿ ನಾಟಿ ಮಾಡಿ ಸಂಭ್ರಮಿಸಿದರು.

ಹೊಸನಗರ ತಾಲೂಕಿನ ಕಾರೆಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಸಮೀಪವಿರುವ ಗದ್ದೆಗೆ ತಮ್ಮ ಶಿಕ್ಷಕರೊಂದಿಗೆ ತೆರಳಿ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು.
ಗ್ರಾಮೀಣ ಪ್ರದೇಶದ ಮಕ್ಕಳಾಗಿರುವುದರಿಂದ ಸಹಜವಾಗಿಯೇ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ಹಿಂದಿನ ದಿನಗಳಲ್ಲಿ ಪಾಲಕರೊಂದಿಗೆ ಮಕ್ಕಳು ಮನೆಯಲ್ಲಿ ಕೈಗೊಳ್ಳುವ ಎಲ್ಲ ಕೆಲಸದಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಕೆಲಸ ಮಾಡಿಸಬಾರದು ಎಂಬ ಆಲೋಚನೆ ಬಂದಿರುವುದರಿಂದ ಪ್ರಾಯೋಗಿಕ ಕಲಿಕೆಗೆ ತೊಡಕುಂಟಾಗುತ್ತಿದೆ ಎಂದು ಮುಖ್ಯಶಿಕ್ಷಕ ಮಂಜುನಾಥ ತಿಳಿಸಿದರು.
ಬದಲಾದ ಕಾಲಘಟ್ಟದಲ್ಲಿ ಪ್ರತಿ ಮನೆಯಲ್ಲೂ ಸಂಪರ್ಕ ಸಾಧನವಾಗಿರುವ ಮೊಬೈಲ್ ಫೋನ್‌ಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದನ್ನರಿತ ಶಿಕ್ಷಣ ಇಲಾಖೆ ಕೃಷಿಸಾರವನ್ನು ತಿಳಿಸುವ ಒಂದು ಪಾಠವನ್ನು ಅಳವಡಿಸಿದೆ. ಗ್ರಾಮೀಣ ಸೊಗಡನ್ನು ವಿದ್ಯಾರ್ಥಿಗಳಲ್ಲಿ ಪರಿಚಯಿಸುವುದು ಇಲಾಖೆಯ ಉದ್ದೇಶವಾಗಿದೆ. ಅದರಂತೆ ಹೊಲ, ಗದ್ದೆಗಳಲ್ಲಿಯೇ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಬೇಕಿದೆ. ಇದರಿಂದ ನಮ್ಮ ಭಾಗದಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಪ್ರಾಯೋಗಿಕವಾಗಿ ಕಲಿಸುವುದರಿಂದ ಮಕ್ಕಳ ಮನಸ್ಸಿನಲ್ಲಿ ಧೀರ್ಘಕಾಲದವರೆಗೆ ನೆನೆಪಿನಲ್ಲಿರುತ್ತದೆ. ದೊಡ್ಡವರಾದ ಮೇಲೆ ಕೃಷಿ ಚಟುವಟಿಕೆಯಲ್ಲಿ ತೊಡಕಿಕೊಳ್ಳಲು ಇದು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ಎಸ್‌ಡಿಎಂಸಿ ಸದಸ್ಯ ರಮೇಶ, ಶಿಕ್ಷಕರಾದ ಆಶಾರಾಣಿ, ಪ್ರಶಾಂತ, ಅಡುಗೆ ಸಹಾಯಕಿ ಸವಿತಾ ಇತರರಿದ್ದರು.

ಇತ್ತೀಚಿನ ವರ್ಷಗಳಲ್ಲಿ ಭತ್ತ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಮಕ್ಕಳು ಬೇಸಾಯದಲ್ಲಿ ನಿರಾಸಕ್ತಿ ಹೊಂದಿದ್ದಾರೆ. ನಾಟಿ ಮಾಡುವುದನ್ನು ತೋರಿಸಲು ಶಿಕ್ಷಕರು ಮಕ್ಕಳನ್ನು ಕರೆತಂದಿರುವುದು ಒಳ್ಳೆಯ ಬೆಳವಣಿಗೆ. ನಮಗೂ ಸಂತೋಷವಾಯಿತು.ರೇಣುಕಮ್ಮ, ರೈತ ಮಹಿಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net