

ಕಡಬ: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದು, ಕನ್ನಡದ ಜತೆಗೆ ಇಂಗ್ಲಿಷ್ ಕಲಿಸಲಾಗುತ್ತದೆ. ಮಕ್ಕಳ ಪೌಷ್ಟಿಕಾಂಶ ಬೆಳವಣಿಗೆ ಸಲುವಾಗಿ ಬಿಸಿಯೂಟ, ಮೊಟ್ಟೆ ಮೊದಲಾದ ಯೋಜನೆಗಳನ್ನು ರೂಪಿಸಿದೆ ಎಂದು ಶಿಕ್ಷಣ ಇಲಾಖೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹೇಳಿದರು.
ಕಡಬ ತಾಲೂಕು ಕೊೈಲ ಗಂಡಿಬಾಗಿಲು ದ.ಕ.ಜಿ.ಪ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಉತ್ಸವ, ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜತೆಗೆ ಆರೋಗ್ಯದ ಕಡೆಯೂ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆ ಬಗ್ಗೆ ತಾತ್ಸಾರ ಸಲ್ಲದು. ತಾಯಂದಿರು ಕನಿಷ್ಠ 1 ಗಂಟೆಯಾದರೂ ಮಕ್ಕಳ ಓದು, ಬರಹ, ಇತರ ಚಟುವಟಿಕೆ ಬಗ್ಗೆ ಗಮನ ಹರಿಸಬೇಕು ಎಂದರು.
ಕೊೈಲ ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಷ್ ಅಧ್ಯಕ್ಷತೆ ವಹಿಸಿದರು. ನಿವೃತ್ತ ಶಿಕ್ಷಕ ಕುಶಾಲಪ್ಪ ಗೌಡ , ಕೊೈಲ ಗ್ರಾಪಂ ಸದಸ್ಯ ಚಂದ್ರಶೇಖರ ಮಾಳ, ಸಾಮಾಜಿಕ ಕಾರ‌್ಯಕರ್ತ ಬಡಿಲ ಹುಸೇನ್, ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಾಬು ಅಗರಿ, ಮುಖ್ಯಶಿಕ್ಷಕಿ ತುಳಸಿ ಮಾತನಾಡಿದರು.
ತಾಪಂ ಮಾಜಿ ಸದಸ್ಯೆ ಜಯಂತಿ ಆರ್.ಗೌಡ, ಕೊೈಲ ಗ್ರಾಪಂ ಸದಸ್ಯರಾದ ನಝೀರ್ ಕೆ., ಕಮಲಾಕ್ಷಿ ಪಾಜಲಿಕೆ, ಲತಾ ನವೀನ್ ಪೂಜಾರಿ, ಸೀತಾರಾಮ ಬಲ್ತಕುಮೇರು, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಪಿ.ಲತೀಫ್, ನಿವೃತ್ತ ಶಿಕ್ಷಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪೂರ್ಣಿಮಾ ಸ್ವಾಗತಿಸಿದರು, ಶಿಲ್ಪಾ ವಂದಿಸಿದರು, ಚಿತ್ರಾವತಿ, ಸುಮಿತ್ರಾ ಕಾರ‌್ಯಕ್ರಮ ನಿರೂಪಿಸಿದರು.