ಗಮನ ಸೆಳೆದ ಚಿಣ್ಣರ ಜಾಣರ ಜಗುಲಿ ಕಾರ್ಯಕ್ರಮ

9-pnp 2
ಪಾಂಡವಪುರ ತಾಲೂಕಿನ ಚಿನಕುರಳಿ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮ ನಡೆಯಿತು.
Published on

ಪಾಂಡವಪುರ: ತಾಲೂಕಿನ ಚಿನಕುರಳಿಯ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ 51ನೇ ವರ್ಷದ ಪಟ್ಟಾಭಿಷೇಕ ಅಂಗವಾಗಿ ಸೋಮವಾರ ‘ಚಿಣ್ಣರ ಜಾಣರ ಜಗುಲಿ, ಕಾರ್ಯಕ್ರಮ ನಡೆಯಿತು.


ಹರಟೆ ಖ್ಯಾತಿಯ ಉಮೇಶ್‌ಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಸ್ಥೆಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರು ಉದ್ಘಾಟಿಸಿದರು. ‘ಚಿಣ್ಣರ ಜಾಣರ ಜಗುಲಿ’ ಹರಟೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ಸಮೂಹ ಮಾಧ್ಯಮಗಳಿಂದ ಸಮಾಜ ಹಾಗೂ ವಿದ್ಯಾರ್ಥಿಗಳ ಜೀವನಕ್ಕೆ ಆಗುತ್ತಿರುವ ಅನುಕೂಲ-ಅನಾನುಕೂಲಗಳ’ ಕುರಿತು ಪರ ಹಾಗೂ ವಿರುದ್ಧ ಚರ್ಚೆ ನಡೆಸಿದರು.
ಸಮೂಹ ಮಾಧ್ಯಮಗಳಿಂದಾಗುತ್ತಿರುವ ಅನುಕೂಲಗಳ ಪರವಾಗಿ ವಿದ್ಯಾರ್ಥಿಗಳಾದ ವಿಸ್ಮಯ, ಜೀವನ, ತಾರುಣ್ಯ ವಾದಿಸಿದರೆ. ತೇಜಶ್ವಿನಿ, ವೇದಾವತಿ ಹಾಗೂ ಸೋಮಶೇಖರ್ ಅನನುಕೂಲಗಳ ಪರ ವಾದ ಮಂಡಿಸಿದರು. ಸಮೂಹ ಮಾಧ್ಯಮಗಳಿಂದ ಸಾಕಷ್ಟು ಅನುಕೂಲವಾಗಿದೆ. ಆಟ, ಪಾಠ, ಶಿಕ್ಷಣ, ಸಾಹಿತ್ಯ, ಜಗತ್ತಿನಲ್ಲಿ ಎಲ್ಲಿ ಏನೇ ನಡೆದರೂ ಕ್ಷಣ ಮಾತ್ರದಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅನುಕೂಲವಾಗಿದೆ ಎಂದು ಒಂದು ತಂಡ ವಾದ ಮಂಡಿಸಿದರು.
ಸಮೂಹ ಮಾಧ್ಯಮ ಸಮಾಜದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿದೆ. ಇದರ ಬಳಕೆಯಿಂದ ಮಕ್ಕಳ ನಡತೆ, ಸಂಸ್ಕಾರ, ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ. ಕುಟುಂಬ ಮತ್ತು ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ. ಸಮೂಹ ಮಾಧ್ಯಮಗಳು ಇಲ್ಲದೆ ಇರುವ ಸಂದರ್ಭದಲ್ಲೂ ಸಾಕಷ್ಟು ಸಾಧನೆ ಮಾಡಲಾಗಿದೆ. ಮೊಬೈಲ್ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೂ ದುಶ್ಪರಿಣಾಮ ಬೀರುತ್ತಿದೆ ಎಂದು ಮತ್ತೊಂದು ತಂಡ ವಾದಿಸಿತು.
ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನೆ ನೀಡುವ ಸಲುವಾಗಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಣ್ಣರ ಜಾಣರ ಜಗಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶಾಲೆಯ ಎಲ್ಲ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ರೈತರು ಕೃಷಿಕರು ಮತ್ತು ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಾಕ್‌ಚಾತುರ್ಯ ಹೆಚ್ಚಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದು. ಈ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ವೇದಿಕೆಗೆ ಹೋಗುವ ಅವಕಾಶ ದೊರಯಲಿದೆ ಎಂದರು.

ಗ್ರಾ ಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಸುಮಾ, ಜ್ಯೋತಿ, ಜಿ ಪಂ ಮಾಜಿ ಸದಸ್ಯೆ ಶಾಂತಲಾ ರಾಮಕೃಷ್ಣೇಗೌಡ, ಮಾಜಿ ಸದಸ್ಯ ಮೈಕ್ ಮಹದೇವು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲೆ ಜಯಶ್ರೀ, ಸಿ.ಆರ್.ರಮೇಶ್, ಮುಖ್ಯಶಿಕ್ಷಕ ಚಿದಂಬರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net