

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬುರುಡೆ ಪ್ರಕರಣದಲ್ಲಿ ಬಂಧಿತ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ಬುಧವಾರ ಕೊನೆಗೊಂಡ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತೆ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶ ವಿಜಯೇಂದ್ರ ಎಚ್.ಟಿ. ಅವರು ಚಿನ್ನಯ್ಯನಿಗೆ ಮೂರು ದಿನಗಳ ಎಸ್‌ಐಟಿ ಕಸ್ಟಡಿ ವಿಸ್ತರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿನ್ನಯ್ಯನ ಆರೋಗ್ಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಕರೆತರಲಾಯಿತು. 10 ದಿನಗಳ ಕಸ್ಟಡಿಯಲ್ಲಿ ಚಿನ್ನಯ್ಯನನ್ನು ಆತನಿಗೆ ಆಶ್ರಯ ನೀಡಿದ ಬೆಂಗಳೂರಿನ ಜಯಂತ್ ನಿವಾಸ ಹಾಗೂ ಉಜಿರೆಯ ಕೆಲವು ಸ್ಥಳಗಳಿಗೆ ಕರೆದುಕೊಂಡು ಹೋಗಿ ಎಸ್‌ಐಟಿ ತಂಡ ಮಹಜರು ನಡೆಸಿತ್ತು. ಆದರೆ ಚಿನ್ನಯ್ಯ ವಾಸವಿದ್ದ ಮಂಡ್ಯ, ತಮಿಳುನಾಡಿನ ಮನೆ ಹಾಗೂ ಮತ್ತಿತರ ಕಡೆಗಳ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಕಾರಣಕ್ಕೆ ಎಸ್‌ಐಟಿ ಅಧಿಕಾರಿಗಳು ಮತ್ತೆ ಮೂರು ದಿನ(ಸೆ.6ರವರೆಗೆ) ಚಿನ್ನಯ್ಯನನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಪಂಚನಾಮೆಗೆ ಸರ್ಕಾರಿ ಅಧಿಕಾರಿಗಳ ಬಳಕೆ:
ಚಿನ್ನಯ್ಯ ವಿಚಾರಣೆ ವೇಳೆ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಪ್ರತಿಯೊಂದು ಮಹಜರಿಗೂ ಸರ್ಕಾರಿ ಅಧಿಕಾರಿಗಳನ್ನು ಬಳಕೆ ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಎಸ್‌ಐಟಿ ಬಳಸಿಕೊಳ್ಳುತ್ತಿದೆ. ಪ್ರತಿಯೊಂದು ಸಾಕ್ಷಿ ರಕ್ಷಣೆಗೆ ಎಸ್‌ಐಟಿ ಮುಂದಾಗಿದೆ.