

ಚಿಕ್ಕನಾಯಕನಹಳ್ಳಿ : ಎಲ್ಲ ಸಮುದಾಯಗಳ ಮಹನೀಯರ ಜಯಂತಿಗಳನ್ನು ಏಕದಿನ ಏಕವೇದಿಕೆಯಲ್ಲಿ ಆಚರಿಸುವ ಮೂಲಕ
ಅವರ ತತ್ವಾದರ್ಶ ತಿಳಿಸುವ ಒಂದು ಐತಿಹಾಸ ಕಾರ್ಯಕ್ರಮಕ್ಕೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಎಲ್ಲ ಸಮುದಾಯದವರು ಸೇರಿ ತೀಮಾರ್ನ ಮಾಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ತೀ.ನಂ.ಶ್ರೀ.ಭವನದಲ್ಲಿ ಆಯೋಜಿಸಿದ್ದ 2025ನೇ ಕ್ಯಾಲೆಂಡರ್ ವರ್ಷದ ಜಯಂತಿಗಳನ್ನು ಏಕದಿನಲ್ಲಿ ಆಚರಿಸುವ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬ ಮಹನೀಯರನ್ನು ನೆನಪು ಮಾಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. 2025ರ ಕ್ಯಾಲೆಂಡರ್ನಲ್ಲಿ ಬರುವಂತಹ 52 ಮಹನೀಯರ ಜಯಂತಿಗಳನ್ನೊಳಗೊಂಡ ಒಟ್ಟು 32 ಜನಾಂಗದವರೊಂದಿಗೆ ಸಂವಿಧಾನ ಸಮರ್ಪಣಾ ದಿನವಾದ ನವೆಂಬರ್ 26ರಂದು ಒಂದೇ ವೇದಿಕೆಯಲ್ಲಿ ಆಚರಿಸಲು ತೀಮಾರ್ನ ಮಾಡಲಾಗಿದೆ ಎಂದರು.
ತಹಸೀಲ್ದಾರ್ ಕೆ.ಪುರಂದರ ಮಾತನಾಡಿ, ಎಲ್ಲ 52 ಮಹನೀಯರ ಜಯಂತಿಗೆ ಒಟ್ಟು 12 ಸಮಿತಿಗಳನ್ನು ಮಾಡಲಾಗಿದ್ದು, ಇದರಲ್ಲಿ ಒಂದು ಸಮಿತಿಯು ಸ್ವಾಗತ ಸಮಿತಿಯಾಗಿದ್ದು, ಇದರಲ್ಲಿ ಶಾಸಕ ಅಧ್ಯಕ್ಷರಾಗಿ, ಮಾಜಿ ಶಾಸಕರು ಉಪಾದ್ಯಕ್ಷರಾಗಿ, ತಹಸೀಲ್ದಾರ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸಮಾಜದ ಎಲ್ಲ ಜನಾಂಗದ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಇದರೊಂದಿಗೆ ಉಳಿದ 11 ವಿವಿಧ ಸಮಿತಿಗಳನ್ನು ಮಾಡಲಾಗಿದ್ದು, ಇದರಲ್ಲಿ ಸಂಬಂಧ ಪಟ್ಟ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯದರ್ಶಿಯಾಗಿದ್ದು, ಪ್ರತಿಜನಾಂಗದವರಿಂದ 11 ಜನರನ್ನು ಎಲ್ಲ ಸಮಿತಿಗಳ ಸದಸ್ಯರಾಗಿ ಆಯ್ಕೆ ಮಾಡಲಾಗುವುದು ಎಂದರು.
ದಲಿತ ಸಂಘಟನೆಗಳ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ, ಒಕ್ಕಲಿಗ ಸಮುದಾಯದ ರಾಮಚಂದ್ರಯ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ಲಿಂಗದೇವರು ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇಒ ದೊಡ್ಡಸಿದ್ದಯ್ಯ, ಸಿಪಿಐ ನಧಾಪ್ ಸೇರಿ ತಾಲೂಕಿನ ಎಲ್ಲ ಜನಾಂಗದ ಮುಖಂಡರು ಇದ್ದರು.