

ಚಿಕ್ಕೋಡಿ: ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಚಿಂಚಣಿ ಸೇರಿ ಗಡಿಭಾಗದ ಜನರನ್ನು ಸಂಸ್ಕಾರಯುತರನ್ನಾಗಿ ಮಾಡಿರುವ ಕೀರ್ತಿ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿಗೆ ಸಲ್ಲುತ್ತದೆ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠದಲ್ಲಿ ಮಹಾದಾಸೋಹ-2021, ಅಲ್ಲಮಪ್ರಭು ಮಹಾಸ್ವಾಮಿಗಳ ಷಷ್ಟಿಪೂರ್ತಿ ಸಮಾರಂಭ ಹಾಗೂ ಶ್ರೀಮಠದ ಪೀಠಾಧಿಕಾರಿಗಳ ರಜತ ಮಹೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಬಸವ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗಡಿಭಾಗದ ಜನರನ್ನು ಜಾಗೃತಗೊಳಿಸುವ ಮೂಲಕ ಅಜ್ಞಾನದ ಕತ್ತಲೆ ಹೋಗಲಾಡಿಸಲು ಶ್ರೀಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು. ಗಡಿಯಂಚಿನ ಮಹಾರಾಷ್ಟ್ರ ಹಾಗೂ ದೇಶ ಸಂಚಾರದ ಸಂದರ್ಭದಲ್ಲಿ ಅಲ್ಲಮಪ್ರಭುಗಳು ಚಿಂಚಣಿ ಭಾಗದಲ್ಲಿ ಸಂಚರಿಸಿದ್ದರಿಂದ ಚಿಂಚಣಿ ಶ್ರೀಮಠ ಐತಿಹಾಸಿಕ ಪ್ರಸಿದ್ಧಿ ಹೊಂದಿದ್ದು, ಈ ಮಠದಲ್ಲಿ ಮಾಯೆಯು ಸಹ ಪೂಜಿಸಲ್ಪಡುತ್ತಿರುವುದು ವಿಶೇಷವಾಗಿದೆ ಎಂದರು. ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಯುಗದಲ್ಲಿ ಜನರ ಮನಸ್ಸಿನ ಮಲಿನತೆ ಹೆಚ್ಚಾಗಿದ್ದು, ಅದನ್ನು ತೆಗೆದು ಹಾಕಲು ಶರಣರ ಅನುಭಾವದ ನುಡಿಗಳೇ ಸಹಕಾರಿ. ಅದನ್ನು ಗಮನದಲ್ಲಿಸಿಕೊಂಡು ಬಸವ ಪುರಾಣ ಪ್ರವಚನವನ್ನು ಶ್ರೀಗಳ ಶಿಷ್ಯ ಬಳಗ ಆಯೋಜಿಸಿರುವುದು ಶ್ಲಾಘನೀಯ ಎಂದರು. ಜನರು ನೆಮ್ಮದಿಯಿಂದ ಬದುಕಬೇಕು. ಜನರ ಮನಸ್ಸು ಶುಚಿಯಾಗಿಸುವುದೆ ಪ್ರವಚನದ ಸಾರವಾಗಿದ್ದು, ಜನರ ಮನಸ್ಸಿನಲ್ಲಿನ ಚಂಚಲತೆ ನೀಗಿದರೆ ಸುಖ-ಶಾಂತಿ ಪಡೆಯಬಹುದು ಎಂದು ತಿಳಿಸಿದರು.
ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ವರ್ಷದ ಕನ್ನಡಿಗ ಪ್ರಶಸ್ತಿ ಸ್ವೀಕರಿಸುವಾಗ ತೋಂಟದ ಸಿದ್ದರಾಮ ಸ್ವಾಮೀಜಿಗಳು, ತಾವು ಮಠದ ಸ್ವಾಮೀಜಿ ಅಲ್ಲ. ಸೇವಕ ಎಂದು ಹೇಳಿರುವುದು ಅವರ ಕಾರ್ಯತತ್ಪರತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.
ಮುದಗಲ್ಲ-ತಿಮ್ಮಾಪುರ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಮುಖಂಡ ಅಭಯ ಪಾಟೀಲ, ಉಪಾಧ್ಯಕ್ಷ ಸೌರಭ ಪಾಟೀಲ, ಬಸವರಾಜ ಪಾಟೀಲ, ರಾಮಗೌಡ ಧರನಗುತ್ತಿ, ಅರುಣ ಕರ‌್ಯಾಪ್ಪಗೋಳ, ಸಂಜು ಪರೀಟ, ರಮೇಶ ಪಾಟೀಲ, ದೀಪಕ ಮುದ್ದಪ್ಪಗೋಳ, ಸುಭಾಷ ಚೌಗಲಾ, ಸಂಜಯ ಬೇರಡ ಸೇರಿ ಗ್ರಾಮ ಪಂಚಾಯಿತಿ ಸದಸ್ಯರು, ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಲಕ್ಷ್ಮಣ ಸತ್ಯಪ್ಪ ಮಾಳಿ ದಂಪತಿ ಬಸವ ಪ್ರಸಾದ ಸೇವೆ ಒದಗಿಸಿದ್ದರು.
ಬಾಗಲಕೋಟೆ ಶಂಕರಯ್ಯ ಗುರುಮಠ ಸಂಗೀತ ಸೇವೆ ನೀಡಿದರು. ಗದಗನ ಬಸವರಾಜ ಹೊನ್ನಿಗನೂರ ತಬಲಾ ವಾದನ,
ಗಿರೀಶ ಕೋಳಾಳ ವಯೋಲಿನ್ ಸಾಥ್ ನೀಡಿದರು.