

ಸಿದ್ದಾಪುರ: ತಾಲೂಕಿನಾದ್ಯಂತ ಪುನರ್ವಸು ಮಳೆ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಗಾಳಿ, ಮಳೆ ಜನತೆಯನ್ನು ಕಂಗೆಡಿಸಿದೆ. ‘ಹಳ್ಳಿ ಊರಿಗೆ ಕೊಳ್ಳಿ ದೀಪವೇ ಗತಿ’ ಎಂಬಂತ ಸ್ಥಿತಿ ಎದುರಾಗಿದೆ.
ಗಾಳಿ- ಮಳೆಯಿಂದಾಗಿ ರಸ್ತೆ ಅಕ್ಕಪಕ್ಕದ ನೂರಾರು ಮರಗಳು ಧರೆಗುರುಳಿವೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಮರೀಚಿಕೆಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಗ್ರಾಮೀಣ ಪ್ರದೇಶದಲ್ಲಿನ ಬಿಎಸ್ಎನ್ಎಲ್, ಜಿಯೋ, ಏರ್ಟೆಲ್ ಸೇವೆ ಸ್ಥಗಿತಗೊಂಡಿದೆ. ಇದರಿಂದ ಯಾವ ಊರಿನಲ್ಲಿ ಏನೇನು ಅವಘಡಗಳು ನಡೆದಿವೆ ಎಂದು ತಿಳಿದುಕೊಳ್ಳುವುದಕ್ಕೂ ಆಗದ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನ ಹಲವೆಡೆ ರಸ್ತೆ ಪಕ್ಕದಲ್ಲಿ, ಎತ್ತರದ ಧರೆಯಲ್ಲಿ ಅಪಾಯದಂಚಿನಲ್ಲಿ ಗಿಡಮರಗಳಿದ್ದು, ಅವುಗಳನ್ನು ತೆರವುಗೊಳಿಸಿ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಲು ಅರಣ್ಯ ಇಲಾಖೆಯವರು ಮುಂದಾಗುತ್ತಿಲ್ಲ. ಒಮ್ಮೆ ಮರಬಿದ್ದರೆ ಸಂಚಾರಕ್ಕೆ ತೊಂದರೆ ಆಗುವುದರ ಜತೆಗೆ ವಿದ್ಯುತ್ ಕಂಬ ಹಾಗೂ ತಂತಿಯ ಮೇಲೆ ಮರಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನಲ್ಲಿ ಇಂದಿನವರೆಗೆ ಗಾಳಿ- ಮಳೆಗೆ 565 ಕಂಬಗಳು ಮುರಿದು ಬಿದ್ದಿವೆ. 17ಟಿ.ಸಿ. ಹಾನಿಗೊಳಗಾಗಿದೆ. ಇಷ್ಟೆಲ್ಲ ಹಾನಿ ಸಂಭವಿಸಿದರೂ ಹೆಸ್ಕಾಂ ನೌಕರರು ವಿದ್ಯುತ್ ಸಂಪರ್ಕ ನೀಡುವುದಕ್ಕೆ ಹಗಲಿರುಳು ಶ್ರಮವಹಿಸುತ್ತಿದ್ದಾರೆ.
ಜೋಗಕ್ಕೆ ಸಮೀಪ ಇರುವ ಪ್ರವಾಸಿ ಕೇಂದ್ರವಾಗಿರುವ ಮಾವಿನಗುಂಡಿ, ಕಿಲಾರ, ಜೋಗಿನಮಠ, ಬಸವನಬೈಲ್, ಹೆಜನಿ ಸುತ್ತ ಮುತ್ತ ಕಳೆದ ಏಳೆಂಟು ದಿನಗಳಿಂದ ವಿದ್ಯುತ್ ಸಂಪರ್ಕ ಕಂಡಿತಗೊಂಡಿದ್ದು, ಕತ್ತಲಿನಲ್ಲೇ ಕಾಲಕಳೆಯುವಂತಾಗಿದೆ.
ಮಳೆ- ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ನೀಡುವುದು ಹೆಸ್ಕಾಂ ಇಲಾಖೆಗೆ ಸವಾಲಾಗಿದೆ. ಈ ನಡುವೆ ಕಗ್ಗತ್ತಲಿನಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ಜನತೆಯದ್ದಾಗಿದೆ. ಗ್ರಾಮೀಣ ಪ್ರದೇಶಕ್ಕೆ ಕೊಳ್ಳಿದೀಪವೇ ಗತಿ ಎನ್ನುವಂತಾಗಿರುವುದರಿಂದ ಮನೆಯ ಮೂಲೆಯಲ್ಲಿದ್ದ ಚಿಮಣಿ ದೀಪ ( ಸೀಮೆ ಎಣ್ಣೆ ದೀಪ), ಲಾಟಾನುಗಳು ಹಲವು ವರ್ಷಗಳ ನಂತರ ಮತ್ತೆ ಉರಿಯುವಂತಾಗಿದೆ. ಗ್ರಾಮೀಣ ಪ್ರದೇಶದಂತೆ ಪಟ್ಟಣದಲ್ಲಿಯೂ ವಿದ್ಯುತ್ ಸಂಪರ್ಕ ಸರಿಯಾಗಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಪಟ್ಟಣದವರ ಅಳಲು.