ಒಂದೇ ವರ್ಷದಲ್ಲಿ ಬಿಬಿಎಂಪಿಯಿಂದ ಕೋಟಿಗೂ ಹೆಚ್ಚು ಹಣ ಪಡೆದ 'ಚಿಲುಮೆ' ಮುಖ್ಯಸ್ಥ..!

4
Published on

ಬೆಂಗಳೂರು: ಬಿಬಿಎಂಪಿಯಿಂದ ಮತದಾರರ ಮಾಹಿತಿ ಸೋರಿಕೆ ಆಗಿದೆ ಎನ್ನುವ ಆರೋಪ ಬಿಜೆಪಿ ಸರ್ಕಾರದ ಮೇಲೆ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಸಂಚಲನ ಮೂಡಿತ್ತು. ನಂತರ ಒಂದೊಂದಾಗಿಯೇ ಸ್ಫೋಟಕ ಮಾಹಿತಿಗಳೂ ಬರತೊಡಗಿದ್ದವು. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಂದಿದೆ. ಚಿಲುಮೆ ಸಂಸ್ಥೆ ಮುಖ್ಯಸ್ಥ ಒಂದು ವರ್ಷದಲ್ಲಿ ಈತ ಬಿಬಿಎಂಪಿಯಿಂದ ಒಂದು ಕೋಟಿಯಷ್ಟು ಹಣವನ್ನು ಪಡೆದಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.

ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಪಟ್ಟ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್​ಗೆ ಬಿಬಿಎಂಪಿಯೇ ದುಡ್ಡಿನ ಖಜಾನೆಯಾಗಿ ಬಿಟ್ಟಿತ್ತು. ಬಿಬಿಎಂಪಿಯಿಂದ ರವಿಕುಮಾರ್ ಲಕ್ಷಾಂತರ ಹಣ ಪಡೆದಿದ್ದಾರೆ ಎನ್ನಲಾಗಿದೆ. 2022 ರಲ್ಲಿ 98 ಲಕ್ಷ ಮತ್ತು 85 ಲಕ್ಷ ಹಣ ರವಿಕುಮಾರ್ ಅಕೌಂಟ್ ಗೆ ಬಿದ್ದಿತ್ತು. ಅಂದರೆ ಒಂದೇ ವರ್ಷದಲ್ಲಿ ಒಂದು ಕೋಟಿ ಅಧಿಕ ಹಣವನ್ನ ರವಿಕುಮಾರ್ ಪಡೆದ ಹಾಗೆ ಆಗಿದೆ. ಸರ್ವೇ ಹಣದಲ್ಲಿ ಬಹುತೇಕ ಹಣವನ್ನು ರವಿಕುಮಾರ್ ಡ್ರಾ ಮಾಡಿದ್ದಾರೆ ಎಂದೂ ಕಂಡು ಬಂದಿದೆ.

ಬಿಬಿಎಂಪಿಯ ಹಲವು ಸರ್ವೇಗಳನ್ನ ರವಿಕುಮಾರ್ ಮಾಡಿಸಿದ್ದರು. ಶೈಕ್ಷಣಿಕ, ಸಾಮಾಜಿಕ ಮತ್ತು ಸ್ಕಾಲರ್ ಶಿಪ್ ಸರ್ವೇಗಳನ್ನು ಚಿಲುಮೆ ಸಂಸ್ಥೆ ಮೂಲಕ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಕೋಟಿ ಗಟ್ಟಲೆ ಹಣ ಹಾಕಿದೆ. ಮತದಾರರ ಮಾಹಿತಿ ಕಲೆಹಾಕುವ ಮೊದಲೇ ಈ ಚಿಲುಮೆ ಸಂಸ್ಥೆ ಬೇರೆ ಬೇರೆ ಸರ್ವೇ ನಡೆಸಿದೆ. ಇದೀಗ ಪೊಲೀಸರ ತನಿಖೆ ವೇಳೆ ಚಿಲುಮೆ ಸಂಸ್ಥೆ ಸರ್ವೇ ಹಾಗೂ ಪಡೆದ ಹಣದ ಪ್ರತಿಯೋಂದೂ ವಿವರ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net