ಬೇಸಿಗೆ ಶಿಬಿರದಲ್ಲಿ ಪ್ರಕೃತಿ ಪ್ರೀತಿ ಹರೇಕಳದಲ್ಲಿ ಪರಿಸರವಾದಿ ಕೃಷ್ಣಪ್ಪ ಬೋಂದೆಲ್ ಅಭಿಮತ

mng--13 April Chilume
Published on

ಮಂಗಳೂರು: ಮನುಷ್ಯರ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರ ಆಗುತ್ತಿರುವ ದೌರ್ಜನ್ಯದಿಂದಾಗಿ ಪ್ರಾಕೃತಿಕ ಅಸಮತೋಲನ ಉಂಟಾಗಲು ಕಾರಣವಾಗಿದೆ. ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪರಿಸರ ಪ್ರೀತಿ ಹುಟ್ಟಿಸುವ ಅನಿವಾರ್ಯತೆ ಇದೆ ಎಂದು ಪರಿಸರವಾದಿ ಕೃಷ್ಣಪ್ಪ ಬೋಂದೆಲ್ ಹೇಳಿದರು.


ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಸೌಜನ್ಯ ಸ್ಕೌಟ್ಸ್ ಮತ್ತು ಗೈಡ್ಸ್ ದಳದ ವತಿಯಿಂದ ನಡೆದ ಎರಡು ದಿನಗಳ ಬೇಸಿಗೆ ಶಿಬಿರ ಚಿಲುಮೆ 2024ನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪರಿಸರವನ್ನು ಸಂರಕ್ಷಿಸಿದರೆ ನಮ್ಮ ಸಾವಿರಾರು ಸಮಸ್ಯೆಗಳು ಪರಿಹಾರವಾದಂತೆ. ಪ್ರಕೃತಿಯೊಂದಿಗೆ ನಾವೆಲ್ಲರೂ ಬದುಕಲು ಕಲಿಯಬೇಕು. ಇಂತಹ ಶಿಬಿರಗಳಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಹೆಚ್ಚಿನ ಜ್ಞಾನವನ್ನು ಕಲಿಸಿಕೊಡುವ ಕೆಲಸ ಆಗಬೇಕು ಎಂದವರು ಹೇಳಿದರು.


ಶಾಲಾ ಮುಖ್ಯ ಶಿಕ್ಷಕಿ ಉಷಾಲತಾ ಅಧ್ಯಕ್ಷತೆ ವಹಿಸಿದ್ದರು. ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಕೇವಲ ಪಠ್ಯ ಪುಸ್ತಕದಿಂದ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.


ಈ ಸಂದರ್ಭದಲ್ಲಿ ತರಬೇತುದಾರ ರವಿಶಂಕರ್ ಅವರು ಯುಗಾದಿ ಹಬ್ಬದ ಆಚರಣೆಯ ಮಹತ್ವವನ್ನು ತಿಳಿಸಿದರು. ಎಲ್ಲಾ ಶಿಬಿರಾರ್ಥಿ ಗಳಿಗೂ ಬೇವು-ಬೆಲ್ಲ ಹಂಚಲಾಯಿತು. ಶಿಬಿರದ ನಿರ್ದೇಶಕರು ಸ್ಕೌಟ್ ಮಾಸ್ಟರ್ ತ್ಯಾಗಂ ಹರೇಕಳ ಸ್ವಾಗತಿಸಿದರು.


ಹಿರಿಯ ಶಿಕ್ಷಕಿ ಮೋಹಿನಿ ವಂದಿಸಿದರು. ಇದೇ ಸಂದರ್ಭದಲ್ಲಿ ತರಬೇತುದಾರರಾದ ವಿಶ್ವಥ್, ಶಿಕ್ಷಕರಾದ ಕೃಷ್ಣ ಶಾಸ್ತ್ರಿ, ಕುಮುದ ದೇವಿ ಸ್ಮಿತಾ, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net