ಮೆಣಸಿನಕಾಯಿ ವಹಿವಾಟು ಸುಗಮ, ಹುಬ್ಬಳ್ಳಿಯಲ್ಲಿ ಉತ್ತಮ ವ್ಯಾಪಾರ

IMG_20240313_112826_994.jpg
Published on

ಹುಬ್ಬಳ್ಳಿ: ಇಲ್ಲಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ಕೆಂಪುಮೆಣಸಿನಕಾಯಿ ವಹಿವಾಟು ಉತ್ತಮವಾಗಿ ನಡೆದಿದೆ. ಏಷ್ಯಾ ಖಂಡದ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಎಪಿಎಂಸಿಯಲ್ಲಿಯೂ ಅಷ್ಟೇ ದೊಡ್ಡ ಮಟ್ಟದಲ್ಲಿ ವ್ಯಾಪಾರ ನಡೆಯುತ್ತದೆ.

ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಗದ್ದಲದ ನಂತರ ಇಲ್ಲಿ ಯಾವುದೇ ಅಂತಹ ಗೊಂದಲಗಳು ಉಂಟಾಗದಂತೆ ಆಡಳಿತ ವ್ಯವಸ್ಥೆ ಮುಂಜಾಗ್ರತೆ ವಹಿಸಿದೆ. ರೈತರು, ವ್ಯಾಪಾರಸ್ಥರು, ಖರೀದಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಗಮ ವಹಿವಾಟು ನಡೆಸಲು ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದೆ.

ಬುಧವಾರ ಸುಮಾರು 30 ಸಾವಿರಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾಗಿತ್ತು. ಎಪಿಎಂಸಿಯ ಬಹುತೇಕ ರಸ್ತೆಗಳಲ್ಲಿ ಅಲ್ಲಲ್ಲಿ ಚೀಲಗಳನ್ನು ಇಟ್ಟು ಟೆಂಡರ್ ನಡೆಸಲಾಯಿತು. ಪ್ರತಿ ಕ್ವಿಂಟಾಲ್ಗೆ ಕನಿಷ್ಠ 2050 ರೂ.ಗಳಿಂದ ಗರಿಷ್ಠ 34700 ರೂಪಾಯಿವರೆಗೂ ಮಾರಾಟವಾಗಿದೆ.

ಸೀಸನ್ ಮುಗಿಯುತ್ತ ಬಂದರೂ ಇನ್ನೂ ಮೆಣಸಿನಕಾಯಿ ಆವಕವಾಗುತ್ತಿರುವುದರಿಂದ ಇನ್ನಷ್ಟು ದಿನ ಟೆಂಡರ್ ಪ್ರಕ್ರಿಯೆ ಮುಂದುವರಿಯಲಿದೆ.

ಮೆಣಸಿನಕಾಯಿ ಬೆಳೆಗಾರರ ಸಮಸ್ಯೆ ಹಾಗೂ ಮಾರುಕಟ್ಟೆ ಗೊಂದಲಗಳ ಮಧ್ಯೆಯೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಎಪಿಎಂಸಿ ಕಾರ್ಯದರ್ಶಿ ಮೇರುನಂದನ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ, ಸೂಚನೆ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಉತ್ತಮ ಮೆಣಸಿನಕಾಯಿಗೆ ಟೆಂಡರ್ನಲ್ಲಿ ಒಳ್ಳೆಯ ದರ ನಿಗದಿಯಾಗುತ್ತಿದೆ ಎಂದು ಹಿರಿಯ ವ್ಯಾಪಾರಸ್ಥ ಬಸವರಾಜ ಯಕಲಾಸಪುರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net