

ಹುಬ್ಬಳ್ಳಿ: ಮಧ್ಯವರ್ತಿಗಳಿಲ್ಲದೆ ರೈತರು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅನುಕೂಲವಾಗಿರುವ ಒಣಮೆಣಸಿನಕಾಯಿ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು, ಇದರಿಂದ ಹೆಚ್ಚಿನ ಜನರಿಗೆ ಸಹಾಯವಾಗಬೇಕು ಎಂದು ಶಾಸಕ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದಲ್ಲಿರುವ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ರೈತ ಉತ್ಪಾದಕ ಸಂಸ್ಥೆ ಹಾಗೂ ಉಳುವಾಯೋಗಿ ರೈತ ಉತ್ಪಾದಕರ ಸಂಸ್ಥೆ ಇವುಗಳ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಒಣ ಮೆಣಸಿನಕಾಯಿ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೇಳದ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು, ಹೆಚ್ಚಿನ ಗ್ರಾಹಕರು ಬರುವಂತೆ ಪ್ರೇರಣೆ ನೀಡಬೇಕು. ಮಾರಾಟಕ್ಕೆ ಬರುವ ರೈತರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದ ಅವರು, ಮೇಳದಲ್ಲಿ ಗ್ರಾಹಕರು ಮತ್ತು ವ್ಯಾಪಾರಸ್ಥರು ಒಂದೇ ವೇದಿಕೆಯಲ್ಲಿ ಬರುತ್ತಾರೆ. ಅವರಿಗೆ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರೈತರು ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು.
ರೈತರಿಗೆ ತರಬೇತಿ ಅಗತ್ಯ: ಕೃಷಿ ಉತ್ಪನ್ನಗಳನ್ನು ಬೆಳೆಯುವ ರೈತರಿಗೆ ಉಳುಮೆಯಿಂದ ಹಿಡಿದು ಸಂಸ್ಕರಣೆ ಹಾಗೂ ಮಾರಾಟ ಮಾಡುವವರೆಗೆ ತರಬೇತಿ ನೀಡುವ ಅವಶ್ಯಕತೆ ಇದೆ. ಇದಕ್ಕಾಗಿ ಸಮಗ್ರ ತರಬೇತಿ ಸಂಸ್ಥೆ ಸ್ಥಾಪನೆ ಮಾಡಲು ಕೃಷಿ ಹಾಗೂ ತೋಟಗಾರಿಕೆ, ಮಂಡಳಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ ಮುಖ್ಯಮಂತ್ರಿ ಬಳಿ ಚರ್ಚಿಸಿ ಮಂಜೂರು ಮಾಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಎಪಿಎಂಸಿ ತಿದ್ದುಪಡಿ ಕಾಯಿದೆಯಿಂದ ಒಂದಿಷ್ಟು ತೊಂದರೆಗಳು ಆಗಿದ್ದವು. ಕೇಂದ್ರ ಸರ್ಕಾರ ಕಾಯಿದೆ ವಾಪಸ್ ಪಡೆದ ನಂತರ ರಾಜ್ಯ ಸರ್ಕಾರವೂ ಅದರಂತೆ ನಡೆದುಕೊಂಡಿದೆ. ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಬಾರದು. ಇಲ್ಲಿ ರೈತರು ನಡೆಸುವ ವಹಿವಾಟು ಸುರತವಾಗಿರುತ್ತದೆ. ಮಾರುಕಟ್ಟೆಗೆ ನೀರು, ಮೂಲ ಸೌಲಭ್ಯಗಳು ಸೇರಿ ಎಲ್ಲ ಅಗತ್ಯಗಳನ್ನು ಪೂರೈಸಲಾಗುವುದು ಎಂದರು.
ಮೇಳದಲ್ಲಿ ಏನೇನಿದೆ? : ಒಣ ಮೆಣಸಿನಕಾಯಿ ಮೇಳದಲ್ಲಿ 100 ಮಳಿಗೆಗಳನ್ನು ತೆರೆಯಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ, ಸಂಶಿ, ಹುಬ್ಬಳ್ಳಿ ತಾಲೂಕು ಸೇರಿ ಸುತ್ತಮುತ್ತಲಿನ ರೈತರು ಮೆಣಸಿನಕಾಯಿ ಮಾರಾಟಕ್ಕೆ ತಂದಿದ್ದಾರೆ. ಬ್ಯಾಡಗಿ ಡಬ್ಬಿ, ದ್ಯಾವನೂರ ಕಡ್ಡಿ, ಗುಂಟೂರ ಖಾರದ ಕಾಯಿ ಹೀಗೆ ತರಹೇವಾರಿ ತಳಿಯ ಮೆಣಸಿನಕಾಯಿ ಮಾರಾಟಕ್ಕೆ ಬಂದಿವೆ.
ಕಳೆದ ಬಾರಿ 447 ಕ್ವಿಂಟಾಲ್ ಮಾರಾಟವಾಗಿ 1.37 ಕೋಟಿ ರೂ. ವಹಿವಾಟು ನಡೆದಿತ್ತು. ಈ ಬಾರಿ ಇದಕ್ಕಿಂತ ಹೆಚ್ಚಿನ ವಹಿವಾಟು ನಡೆಯುವ ನಿರೀೆಯಲ್ಲಿ ಅಧಿಕಾರಿಗಳು ಇದ್ದಾರೆ. ಆದರೆ, ಮೊದಲ ದಿನ ಗ್ರಾಹಕರ ಸ್ಪಂದನೆ ಅಷ್ಟಾಗಿ ಇರಲಿಲ್ಲ. ಇದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿತ್ತು. ಕಳೆದ ವರ್ಷ ಮೂರುಸಾವಿರ ಮಠ ಆವರಣದಲ್ಲಿ ಮೇಳ ನಡೆದಿತ್ತು.
ನಗರ ಪ್ರದೇಶದಲ್ಲಿ ಮೇಳ ಆಯೋಜನೆ ಮಾಡಿದರೆ ಜನರು ಹೆಚ್ಚು ಬರುತ್ತಾರೆ. ಎಪಿಎಂಸಿ ಆವರಣಕ್ಕೆ ಬರಬೇಕಾದರೆ ವಾಹನಕ್ಕೆ ಹೆಚ್ಚು ಬಾಡಿಗೆ ನೀಡಬೇಕು. ಅಲ್ಲದೆ, ವ್ಯಾಪಾರವೂ ಅಷ್ಟಕ್ಕಷ್ಟೇ ನಡೆಯುತ್ತಿದೆ ಎಂದು ಕುಂದಗೋಳದ ರೈತ ಗುರಪ್ಪ ಯಲಿವಾಳ ಅಳಲು ತೋಡಿಕೊಂಡರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ, ಎಚ್.ಆರ್. ನಾಯ್ಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರನ್ನವರ, ಯೋಗೇಶ ಕಿಲಾರಿ, ಅಧಿಕಾರಿಗಳು, ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.