

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿಗೆ ಒಣಮೆಣಸಿನಕಾಯಿ ಆವಕ ದಿನೇದಿನೆ ಹೆಚ್ಚುತ್ತಿದ್ದು, ಶನಿವಾರ ಬಹುತೇಕ ಎಲ್ಲ ರಸ್ತೆಗಳು ಕೆಂಪುಮಯವಾಗಿದ್ದವು.
ವಾರದಲ್ಲಿ ಸೋಮವಾರ, ಬುಧವಾರ ಹಾಗೂ ಶನಿವಾರದಂದು ಮೂರು ದಿನ ಹುಬ್ಬಳ್ಳಿ ಎಪಿಎಂಸಿಯಲ್ಲಿ ಕೆಂಪು ಮೆಣಸಿನಕಾಯಿ ಟೆಂಡರ್ ಇರುತ್ತದೆ. ಈ ಶನಿವಾರ ಸುಮಾರು 44 ಸಾವಿರ ಚೀಲಗಳಷ್ಟು ಮೆಣಸಿನಕಾಯಿಯನ್ನು ರೈತರು ತಂದಿದ್ದರು.
ಇದರಿಂದಾಗಿ ಎಪಿಎಂಸಿಯಲ್ಲಿನ ಮಳಿಗೆಯಲ್ಲಿ ಜಾಗ ಸಾಲದೇ ರಸ್ತೆ ಮೇಲೆ ಚೀಲಗಳನ್ನು ಇಟ್ಟು ಟೆಂಡರ್ ಪ್ರಕ್ರಿಯೆ ನಡೆಸಲಾಯಿತು. ಬ್ಯಾಡಗಿ ಸೇರಿ ವಿವಿಧ ಕಡೆಗಳಿಂದ ಖರೀದಿದಾರರು ಟೆಂಡರ್ನಲ್ಲಿ ಪಾಲ್ಗೊಂಡು ಮೆಣಸಿನಕಾಯಿಗೆ ಉತ್ತಮ ದರ ನಿಗದಿ ಮಾಡಿದರು.
ಶನಿವಾರ ಸರಾಸರಿ 15025 ಕ್ವಿಂಟಾಲ್ (44 ಸಾವಿರ ಚೀಲ) ಮೆಣಸಿನಕಾಯಿ ದಾಖಲೆ ಆವಕವಾಗಿದೆ. ಕ್ವಿಂಟಾಲ್ಗೆ ಕನಿಷ್ಠ 1600 ರೂಪಾಯಿಯಿಂದ ಗರಿಷ್ಠ 70890 ರೂ.ವರೆಗೆ ಮಾರಾಟವಾಗಿದೆ. ಹುಬ್ಬಳ್ಳಿ ಮಾರುಕಟ್ಟೆಗೆ ಎಲ್ಲ ಕಡೆಯ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹಿರಿಯ ವರ್ತಕರ ಬಸವರಾಜ ಯಕಲಾಸಪುರ ತಿಳಿಸಿದರು.
ಈ ಹಿಂದೆ ಹುಬ್ಬಳ್ಳಿಗೆ 43 ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿ ದಾಖಲೆ ಬರೆದಿತ್ತು. ಇದೀಗ ಅದನ್ನು ಮೀರಿ ಬಂದಿದೆ. ಬೇರೆಬೇರೆ ಜಿಲ್ಲೆಗಳಿಂದ ರೈತರು ಬಂದಿರುವುದರಿಂದ ಅವರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯಾಪಾರಸ್ಥರ ಸಂದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ತಿಳಿಸಿದರು.