ಹುಬ್ಬಳ್ಳಿಗೆ ಮೆಣಸಿನಕಾಯಿ ದಾಖಲೆ ಆವಕ, ಉತ್ತಮ ದರವಿಲ್ಲದೆ ಕಂಗಾಲಾದ ಬೆಳೆಗಾರರು

IMG-20240302-WA0006.jpg
Published on

ಹುಬ್ಬಳ್ಳಿ; ಇಲ್ಲಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ದಿನದಿಂದ ದಿನಕ್ಕೆ ಅದರಲ್ಲೂ ಪ್ರತಿ ಶನಿವಾರದ ಟೆಂಡರ್ ಗೆ ಒಣಮೆಣಸಿನಕಾಯಿ ಆವಕ ಹೆಚ್ಚುತ್ತಲೇ ಹೊರಟಿದೆ.

ಧಾರವಾಡ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ಗದಗ, ಹಾವೇರಿ ಜಿಲ್ಲೆಗಳಿಂದಲೂ ರೈತರು ಇಲ್ಲಿಗೆ ಮೆಣಸಿನಕಾಯಿ ತರುತ್ತಿದ್ದಾರೆ. ಅಲ್ಲದೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣದಿಂದ ಗುಂಟೂರ ತಳಿಯ ಮೆಣಸಿನಕಾಯಿ ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ.

ಸ್ಥಳಿಯ ಕುಂದಗೋಳ ಹಾಗೂ ಸುತ್ತಲಿನ ಗ್ರಾಮಗಳಿಂದ ಬ್ಯಾಡಗಿ ತಳಿ, ಡಬ್ಬಿ ಹಾಗೂ ಕಡ್ಡಿ ತಳಿಯ ಮೆಣಸಿನಕಾಯಿ ದೊಡ್ಡ ಪ್ರಮಾಣದಲ್ಲಿ ಬಂದಿದೆ. ಶನಿವಾರ ಒಂದೇ ದಿನ 41,589 ಚೀಲ ಆವಕವಾಗಿದೆ. ಆದರೆ, ದರ ಕಡಿಮೆಯಾಗಿರುವುದು ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಸೋಮವಾರ, ಬುಧವಾರ ಹಾಗೂ ಶನಿವಾರದಂದು ಮೂರು ದಿನ ಹುಬ್ಬಳ್ಳಿ ಎಪಿಎಂಸಿಯಲ್ಲಿ ಕೆಂಪು ಮೆಣಸಿನಕಾಯಿ ಟೆಂಡರ್ ನಡೆಯುತ್ತದೆ. ಎಪಿಎಂಸಿಯ ಬಹುತೇಕ ರಸ್ತೆಗಳು ಇಂದು ಕೆಂಪುಮಯವಾಗಿದ್ದವು.

ಮೆಣಸಿನಕಾಯಿಗೆ ಪ್ರಸಿದ್ಧಿ ಪಡೆದಿರುವ ಬ್ಯಾಡಗಿಯಲ್ಲಿ ಟೆಂಡರ್ ನಡೆಯುತ್ತದೆ. ಶುಕ್ರವಾರ ಅಲ್ಲಿಯೂ ಸುಮಾರು 4 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದೆ.

ಈ ಶನಿವಾರ ಹುಬ್ಬಳ್ಳಿಗೆ ಸುಮಾರು 42 ಸಾವಿರ ಚೀಲಗಳಷ್ಟು ಮೆಣಸಿನಕಾಯಿ ಬಂದಿದ್ದರಿಂದ ಎಪಿಎಂಸಿಯಲ್ಲಿ ಮೆಣಸಿನಕಾಯಿ ಘಾಟು ಹೆಚ್ಚಾಗಿತ್ತು. ಮಳಿಗೆ ಹಾಗೂ ಆವರಣದಲ್ಲಿ ಜಾಗ ಸಾಲದೆ ರಸ್ತೆ ಮೇಲೆ ಚೀಲಗಳನ್ನು ಇಟ್ಟು ಟೆಂಡರ್ ಪ್ರಕ್ರಿಯೆ ನಡೆಸಲಾಯಿತು. ಬ್ಯಾಡಗಿ ಸೇರಿ ವಿವಿಧ ಕಡೆಗಳಿಂದ ಖರೀದಿದಾರರು ಟೆಂಡರ್ನಲ್ಲಿ ಪಾಲ್ಗೊಂಡರು. ಕ್ವಿಂಟಾಲ್ಗೆ ಕನಿಷ್ಠ 2,000 ರೂಪಾಯಿಯಿಂದ ಗರಿಷ್ಠ 48,080 ರೂ.ವರೆಗೆ ಮಾರಾಟವಾಗಿದೆ. ಬಹುತೇಕ ಲಾಟ್ಗಳು ಕ್ವಿಂಟಾಲ್ಗೆ 20 ಸಾವಿರ ರೂ. ಮಾರಾಟವಾಗಿವೆ.

ಈ ವರ್ಷ ಬರಗಾಲವಿದೆ. ಅಷ್ಟು ಇಷ್ಟು ಬಿದ್ದ ಮಳೆಯಲ್ಲಿ ಎರಡು ಎಕರೆ ಮೆಣಸಿನಕಾಯಿ ಬೆಳೆದಿರುವೆ. ಎರಡು ಕ್ವಿಂಟಾಲ್ ಮೆಣಸಿನಕಾಯಿ ಇವತ್ತು ತಂದಿದ್ದೆ. ಟೆಂಡರ್ನಲ್ಲಿ ಅತ್ಯಂತ ಕಡಿಮೆ ಬೆಲೆ ನಿಗದಿಯಾಗಿದೆ. ಆದರೂ, ಮಾರಾಟ ಮಾಡುವುದು ಅನಿವಾರ್ಯ. ಒಂದು ಕಡೆ ಬರಗಾಲ, ಇನ್ನೊಂದೆಡೆ ಬೆಳೆದ ಸಲಿಗೆ ಬೆಲೆ ಇಲ್ಲ' ಎಂದು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ರೈತ ಮಹಾದೇವಪ್ಪ ಅಳಲು ತೋಡಿಕೊಂಡರು.

ಮುಂಗಾರಿನಲ್ಲಿ ಸರಿಯಾಗಿ ಮಳೆಯಾಗದಿದ್ದರೆ ಸಹಜವಾಗಿ ಮೆಣಸಿನಕಾಯಿ ಬೆಳೆಯುವ ಜಮೀನು ಹೆಚ್ಚಾಗಿ, ಸಲು ಕೂಡ ಅಧಿಕವಾಗುತ್ತದೆ. ಹಿಂಗಾರಿನಲ್ಲಿ ಒಂದಿಷ್ಟು ಮಳೆಯಾದರೂ ಸಾಕು ಮೆಣಸಿನಕಾಯಿ ಬರುತ್ತದೆ. ಈ ಬಾರಿ ಹೆಚ್ಚು ರೈತರು ಬೆಳೆದಿದ್ದಾರೆ. ಗುಣಮಟ್ಟಕ್ಕೆ ತಕ್ಕಂತೆ ಬೆಲೆ ಇದ್ದೇ ಇರುತ್ತದೆ' ಎನ್ನುತ್ತಾರೆ ವ್ಯಾಪಾರಸ್ಥ ಬಸವರಾಜ ಯಕಲಾಸಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net