

ಹುಬ್ಬಳ್ಳಿ: ಬರಗಾಲದಿಂದಾಗಿ ಬಹುತೇಕ ಬೆಳೆಗಳು ಕೈಕೊಟ್ಟಿದ್ದರೂ ಒಣಮೆಣಸಿನಕಾಯಿ ಬೆಳೆಗಾರರ ಕೈಹಿಡಿಯುತ್ತಿದೆ. ಇಲ್ಲಿಯ ಶ್ರೀಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಆವಕವಾಗುತ್ತಿದೆ.
ಕಳೆದ ಕೆಲ ವಾರದಿಂದ ಕೆಂಪು ಮೆಣಸಿನಕಾಯಿ ಘಾಟು ಎಪಿಎಂಸಿಯಲ್ಲಿ ಹೆಚ್ಚುತ್ತಿದೆ. ಧಾರವಾಡ ಜಿಲ್ಲೆ ಮಾತ್ರವಲ್ಲ, ಅಕ್ಕಪಕ್ಕದ ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದಲೂ ಸಲು ಬರುತ್ತಿದೆ.
ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ಸೇರಿ ಕೆಲ ರಾಜ್ಯಗಳಿಂದಲೂ ಇಲ್ಲಿಗೆ ಮೆಣಸಿನಕಾಯಿ ಬರುತ್ತಿದೆ ಎಂದು ವರ್ತಕರು ತಿಳಿಸಿದ್ದಾರೆ.
ಹುಬ್ಬಳ್ಳಿ ಎಪಿಎಂಸಿಗೆ ಶನಿವಾರ ಒಂದೇ ದಿನ ಸುಮಾರು 25 ಸಾವಿರ ಚೀಲ ಮೆಣಸಿನಕಾಯಿ ಆವಕವಾಗಿತ್ತು. ಒಳರಸ್ತೆಯಲ್ಲಿ ಎಲ್ಲೆಂದರಲ್ಲಿ ಜಾಗ ಸಿಕ್ಕಲ್ಲಿ ಚೀಲಗಳನ್ನು ಇಟ್ಟು ಟೆಂಡರ್ ಪ್ರಕ್ರಿಯೆ ನಡೆಸಲಾಯಿತು.
ಹುಬ್ಬಳ್ಳಿ ಎಪಿಎಂಸಿಯಲ್ಲಿ ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಹಾಗೂ ಶನಿವಾರ ಮೆಣಸಿನಕಾಯಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ.
ಇಲ್ಲಿಗೆ ಡಬ್ಬಿ, ಕಡ್ಡಿ, ಗುಂಟೂರ ಮುಂತಾದ ತಳಿಯ ಒಣಮೆಣಸಿನಕಾಯಿ ಮಾರಾಟಕ್ಕೆ ತರಲಾಗುತ್ತದೆ. ಈ ಪೈಕಿ ಡಬ್ಬಿ ಮೆಣಸಿನಕಾಯಿಗೆ ಉತ್ತಮ ದರ ಸಿಗುತ್ತಿದೆ. ಶನಿವಾರ ಅತಿ ಹೆಚ್ಚು ಎಂದರೆ ಕ್ವಿಂಟಾಲ್ಗೆ 75 ಸಾವಿರ ರೂಪಾಯಿವರೆಗೂ ಮಾರಾಟವಾಗಿದೆ. ಇದು ಈ ಸೀಸನ್ನಲ್ಲಿ ರೈತರಿಗೆ ಸಿಕ್ಕಿರುವ ಅತಿ ಹೆಚ್ಚಿನ ದರವಾಗಿದೆ ಎಂದು ವರ್ತಕ ಬಸವರಾಜ ಯಕಲಾಸಪುರ ತಿಳಿಸಿದರು.
ಟೆಂಡರ್ನಲ್ಲಿ ಡಬ್ಬಿ ಮೆಣಸಿನಕಾಯಿಗೆ ಉತ್ತಮ ದರ ಸಿಗುತ್ತಿದೆ. ರೈತರು ಮೆಣಸಿನಕಾಯಿ ಹದ ಮಾಡುವಾಗ ಹೆಚ್ಚು ನೀರು ಚಿಮುಕಿಸಬಾರದು. ಒಣದಾಗಿದ್ದಷ್ಟು ಹೆಚ್ಚು ಬೆಲೆ ಲಭ್ಯವಾಗುತ್ತದೆ. ಆದಷ್ಟು 35 ಕೆಜಿ ಚೀಲಗಳಲ್ಲಿ ತುಂಬಿ ತರಬೇಕು ಎಂದು ಎಪಿಎಂಸಿ ವರ್ತಕರ ಸಂದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ರೈತರಲ್ಲಿ ಮನವಿ ಮಾಡಿದ್ದಾರೆ.