ಬ್ಯಾಡಗಿಯಲ್ಲಿ ಮೆಣಸಿನಕಾಯಿ ಪರೀಕ್ಷೆ ಪ್ರಯೋಗಾಲಯ

15byd1
Published on

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ವ್ಯಾಪಾರಿ ಕೇಂದ್ರವಾಗಿರುವ ಬ್ಯಾಡಗಿ ಮಾರುಕಟ್ಟೆ ಬೆಳವಣಿಗೆ ಹಾಗೂ ವರ್ತಕರ, ರೈತರ ಅನುಕೂಲಕ್ಕಾಗಿ ಶೀಘ್ರದಲ್ಲಿ ಮೆಣಸಿನಕಾಯಿ ಪರೀಕ್ಷೆ ಪ್ರಯೋಗಾಲಯಕ್ಕೆ ಮಂಜೂರಾತಿ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ತಿಳಿಸಿದರು.

ಇಲ್ಲಿನ ಎಪಿಎಂಸಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬ್ಯಾಡಗಿ ಕಡ್ಡಿ, ಡಬ್ಬಿ, ಗುಂಟೂರು ತಳಿಗಳಿಂದ ಖ್ಯಾತಿಯಾಗಿರುವ ಇಲ್ಲಿನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಪರೀಕ್ಷೆಯ ಪ್ರಯೋಗಾಲಯದ ಅಗತ್ಯವಿದೆ. ವರ್ತಕರು ಬೇಡಿಕೆ ಸಲ್ಲಿಸಿದ್ದು, ಕೂಡಲೆ 4 ಕೋ.ರೂ. ವೆಚ್ಚದಲ್ಲಿ ಪ್ರಯೋಗಾಲಯ ಆರಂಭಿಸಲು ಮಂಜೂರಾತಿ ನೀಡಲಾಗುವುದು ಎಂದರು.

ಮಾರುಕಟ್ಟೆ ಅಭಿವೃದ್ಧಿಗೆ 10 ಕೋ.ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ರಾಜ್ಯದಲ್ಲಿ 800 ಸಿಬ್ಬಂದಿ ಕೊರತೆಯಿದ್ದು, ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದರು.

ರೈತರಿಗೆ ರಿಯಾಯಿತಿ ಕ್ಯಾಂಟೀನ್: ರಾಜ್ಯದಲ್ಲಿ ಪ್ರಥಮ ಬಾರಿಗೆ ಮೈಸೂರು ಎಪಿಎಂಸಿಯಲ್ಲಿ ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ. ಆಡಳಿತ ಮಂಡಳಿ ಆವರಣದಲ್ಲಿ ಕಟ್ಟಡ ನಿರ್ವಿುಸಲು ಜಾಗ ನೀಡಬೇಕಿದೆ. ರೈತರಿಗೆ, ಕೂಲಿಕಾರರಿಗೆ 5 ರೂ.ನಲ್ಲಿ ತಿಂಡಿ, 10 ರೂ.ನಲ್ಲಿ ಊಟ ಸಿದ್ಧಪಡಿಸಿ ವಿತರಿಸಲಾಗುವುದು. ಮೈಸೂರಲ್ಲಿ ಸ್ಥಳೀಯ ವರ್ತಕರು ಹಾಗೂ ಆಡಳಿತ ಮಂಡಳಿ ಸಹಕಾರದಿಂದ ಆರಂಭಿಸಲಾಗುತ್ತಿದೆ. ಕೋವಿಡ್-19 ಸಮಸ್ಯೆ ತೊಲಗಿದ ಬಳಿಕ ರಾಜ್ಯದೆಲ್ಲೆಡೆ ಜಾರಿ ಮಾಡಲಾಗುವುದು. ಇಲ್ಲಿಯೂ ವರ್ತಕರು ಸಹಕರಿಸಿದಲ್ಲಿ, ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧ ಎಂದರು.

ಮಾರುಕಟ್ಟೆ ಶುಲ್ಕ ಕಡಿತವಿಲ್ಲ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಮುಕ್ತ ವ್ಯಾಪಾರಕ್ಕೆ ವರ್ತಕರಿಗೆ ಅವಕಾಶ ನೀಡಲಾಗಿದೆ. ಇದರಿಂದ ರೈತರಿಗೆ ಪೈಪೋಟಿ ದರ ಸಿಗಲಿದ್ದು, ಎಲ್ಲಿಯೂ ರೈತರಿಂದ ವಿರೋಧ ಬಂದಿಲ್ಲ. ಎಪಿಎಂಸಿ ಯಾರ್ಡ್​ನಲ್ಲಿ ವಹಿವಾಟು ನಡೆಸುವ ವರ್ತಕರು ಹೊರಗಡೆ ಖರೀದಿಗೆ ಶುಲ್ಕವಿಲ್ಲ, ಆವರಣದಲ್ಲಿ ಖರೀದಿಸಿದಲ್ಲಿ ಶುಲ್ಕ ವಿಧಿಸುತ್ತಿರುವ ಕುರಿತು ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ, ಸಚಿವ ಸಂಪುಟ ಸಭೆಯಲ್ಲಿ ಶುಲ್ಕ ಕಡಿಮೆಗೊಳಿಸಲಾಗಿದೆ. ಆದರೆ, ಸಂಪೂರ್ಣ ಶುಲ್ಕರಹಿತ ಮಾಡಲು ಸಾಧ್ಯವಿಲ್ಲ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಯು.ಬಿ. ಬಣಕಾರ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ವಿಜಯ ಮಾಳಗಿ, ಪುರಸಭೆ ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ನಿಂಗನಗೌಡ್ರ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ್ರ, ಪ್ರಭುಗೌಡ್ರ ಇತರರಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕಾಗಿ ಸಚಿವರು ಹಣ ಮಾಡುತ್ತಿದ್ದಾರೆ ಲೆಕ್ಕ ಕೊಡಿ ಎನ್ನುತ್ತಿದ್ದಾರೆ. ನಮ್ಮ ಸರ್ಕಾರ ಲೆಕ್ಕ ನೀಡಲು ಸಿದ್ಧವಿದೆ. ಯಾರನ್ನು ಮಂತ್ರಿ ಮಾಡಬೇಕು ಎನ್ನುವ ವಿಚಾರ ಮುಖ್ಯಮಂತ್ರಿಗಳ ಪರಮಾಧಿಕಾರ. | ಎಸ್.ಟಿ. ಸೋಮಶೇಖರ, ಸಹಕಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net