ಮೆಣಸಿನಕಾಯಿ ಬೀಜ ಖರೀದಿಗೆ ನಿರುತ್ಸಾಹ

26 KURGODU 01
ಕುರುಗೋಡಿನಲ್ಲಿ ಬೋರ್‌ವೆಲ್ ಆಶ್ರಿತ ಕೃಷಿ ಭೂಮಿಯಲ್ಲಿ ಕೆಂಪು ಮೆಣಸಿನಕಾಯಿ ಸಸಿ ನರ್ಸರಿಯಲ್ಲಿ ಬೆಳೆಸುತ್ತಿರುವುದು.
Published on

ಕುರುಗೋಡು: ಕಳೆದ ಬಾರಿಯ ಕೆಂಪು ಮೆಣಸಿನಕಾಯಿ ಬೆಳೆದ ರೈತರು ನಷ್ಟ ಅನುಭವಿಸಿದ ಹಿನ್ನೆಲೆ ಈ ಬಾರಿ ಬಿತ್ತನೆ ಮಾಡಲು ಬೀಜ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ತಾಲೂಕಿನಲ್ಲಿ ಕಳೆದ 15ದಿನದಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ರೈತರು ಈಗಾಗಲೇ ಜಮೀನನ್ನು ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಳೆಯಾಶ್ರಿತ 6,800 ಹಾಗೂ 22,000 ನೀರಾವರಿ ಸೇರಿ ಒಟ್ಟು 28,800 ಹೆಕ್ಟೇರ್ ಕೃಷಿ ಭೂಮಿ ಇದೆ. ಮಳೆಯಾಶ್ರಿತ ಭೂಮಿಯಲ್ಲಿ ಈಗಾಗಲೇ ಕೆಲ ರೈತರು ಹತ್ತಿ, ನವಣೆ, ಸಜ್ಜೆ, ಬಿತ್ತನೆಗೆ ಮುಂದಾಗಿದ್ದಾರೆ. ಬೋರ್‌ವೆಲ್ ಮತ್ತು ನೀರಾವರಿ ಕೃಷಿ ಭೂಮಿಯಲ್ಲಿ ಸುಮಾರು16,000 ಹೆಕ್ಟೇರ್ ಪ್ರದೇಶದಲ್ಲಿ ಕಳೆದ ವಷರ್ ಕೆಂಪು ಮೆಣಸಿನಕಾಯಿ ಬೆಳೆಯಲಾಗಿತ್ತು. ಹೀಗಾಗಿ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸುಮಾರು 1000ಕ್ಕೂ ಅಧಿಕ ನರ್ಸರಿ ಇವೆ.

ಬೋರ್‌ವೆಲ್ ಆಶ್ರಿತ ಶೇ.30 ರೈತರು ಮೇ ಮೊದಲ ವಾರದಲ್ಲೇ ಮೆಣಸಿನಕಾಯಿ ಬೀಜ ಖರೀದಿಸಿ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಜೂನ್ ಕೊನೇ ವಾರ ಅಥವಾ ಜುಲೈ ಮೊದಲ ವಾರದಲ್ಲಿ ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಆದರೆ ನೀರಾವರಿ ಆಶ್ರಿತ ರೈತರು ಮಾತ್ರ ಆಗಸ್ಟ್ ನಲ್ಲಿ ನಾಟಿ ಆರಂಭಿಸುತ್ತಾರೆ. ಆದರೆ ಈವರೆಗೂ ಬೀಜ ಖರೀದಿಗೆ ಗೊಂದಲದಲ್ಲಿದ್ದು, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಬೀಜ ಖರೀದಿಗೆ ನಿರಾಸಕ್ತಿ: ಕಳೆದ ಹಂಗಾಮಿನಲ್ಲಿ ಉತ್ಸಾಹದಿಂದ ಅಂಗಡಿ ಮಾಲೀಕರಿಗೆ ಮುಂಗಡ ಹಣ ನೀಡಿ ಏಪ್ರಿಲ್ ನಲ್ಲಿಯೇ ಬೀಜ ಖರೀದಿಸಿ ಜೂನ್‌ನಲ್ಲಿ ನರ್ಸರಿ ಬೆಳಸುತ್ತಿದ್ದ ರೈತರು ಈಗ ಬೀಜದ ಅಂಗಡಿಯತ್ತ ಮುಖ ಮಾಡುತ್ತಿಲ್ಲ. ಕಾರಣ ಸದ್ಯ ತಾಲೂಕಿನಲ್ಲಿ ಜಮೀನು ಇಲ್ಲದವರು ಒಂದು ಎಕರೆಗೆ ಸುಮಾರು 25 ಸಾವಿರದಿಂದ 50ಸಾವಿರ ರೂ. ನೀಡಿ ಭೂಮಿ ಗುತ್ತಿಗೆ ಪಡೆದು ಕೃಷಿ ಮಾಡಬೇಕಿದೆ. ಅಲ್ಲದೆ ಕಳೆದ ಬಾರಿ ಕಾರ್ಮಿಕರ ಅಭಾವದಿಂದ ಮೆಣಸಿನಕಾಯಿ ಫಸಲು ಬಿಡಿಸಲು ಎಕರೆಗೆ 20 ರಿಂದ 30 ಸಾವಿರ ರೂ. ತನಕ ಕೂಲಿ ನೀಡಲಾಗಿತ್ತು.

ಕೋಲ್ಡ್ ಸ್ಟೋರೇಜ್‌ನಲ್ಲಿ ಕಳೆದ ಹಂಗಾಮಿನ ಫಸಲು ದಾಸ್ತಾನು ಮಾಡಿರುವುದು ಹಾಗೂ ಕಪ್ಪು ನುಸಿಯ ಉಪಟಳದಿಂದ ವಾರದಲ್ಲಿ ಮೂರು ಬಾರಿ ಅಧಿಕ ಬೆಲೆಯ ಔಷಧ ಸಿಂಪಡಣೆ ಸೇರಿ ಇತರ ಕಾರಣದಿಂದ ರೈತರು ನಿರುತ್ಸಾಹ ತೋರುತ್ತಿದ್ದಾರೆ.

ವ್ಯಾಪ್ತಿ ಕ್ಷೀಣಿಸುವ ಸಾಧ್ಯತೆ: ಬೆಲೆ ಕುಸಿತ, ನಷ್ಟದ ಭೀತಿಯ ಜತೆಗೆ ತುಂಗಭದ್ರಾ ಅಣೆಕಟ್ಟಿನ ಗೇಟ್‌ಗೆ ಹಾನಿಯಾದ ಹಿನ್ನೆಲೆ ಜಲಾಶಯವನ್ನು ಸಂಪೂರ್ಣ ಭರ್ತಿ ಮಾಡದಂತೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಬೆಳೆಗೆ ಸಂಪೂರ್ಣ ನೀರು ಸಿಗುವುದು ಅನುಮಾನ ಎಂಬ ವದಂತಿ ತಾಲೂಕಿನಲ್ಲಿ ಹರಿದಾಡುತ್ತಿದೆ. ಇದರಿಂದ ಕೆಲ ರೈತರು ಪರ್ಯಾಯ ಬೆಳೆಯಾಗಿ, ತೊಗರಿ, ಮೆಕ್ಕೆಜೋಳ ಬೆಳೆಯಲು ಚಿಂತಿಸುತ್ತಿದ್ದಾರೆ.

ಕಳೆದ ವರ್ಷ ಮಾರ್ಚ್ ನಿಂದ ಮೇ ವೇಳೆಗೆ 5531, 2043 ತಳಿಯ ಬೀಜವನ್ನು ಸುಮಾರು 25 ರಿಂದ 30 ಕೆ.ಜಿ ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ ಈವರೆಗೂ ಕೇವಲ1 ಕೆ.ಜಿ ಬೀಜ ಮಾತ್ರ ಮಾರಾಟವಾಗಿದೆ. ಇನ್ನೂ ಸಮಯ ಇದೆ ರೈತರು ಖರೀದಿಸುವ ನಿರೀಕ್ಷೆ ಇದೆ.

ರಾಜಶೇಖರ್

ಸನ್ನಿಧಿ ಎಂಟರ್‌ಪ್ರೈಸಸ್‌ಅಂಗಡಿ ಮಾಲೀಕ ಕುರುಗೋಡು

ಮೆಣಸಿನಕಾಯಿ ಬೆಳೆಗೆ ಜುಲೈನಿಂದ ಫೆಬ್ರವರಿ ತನಕ ನೀರಿನ ಅವಶ್ಯಕತೆ ಇದೆ. ಆದರೆ ತುಂಗಭದ್ರಾ ಜಲಾಶಯ ಭರ್ತಿ ಮಾಡುವುದು ಅನುಮಾನ ಎಂಬ ಮಾತುಗಳು ಹರಿದಾಡುತ್ತಿವೆ. ಈವರೆಗೂ ಸಂಬಂಧಪಟ್ಟವರು ಇದರ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಕಳೆದ ಬಾರಿ 16ಎಕರೆಯಲ್ಲಿ ಬೆಳೆ ಬೆಳೆದಿದ್ದೆ ಆದರೆ ಈ ಬಾರಿ ಮೂರರಿಂದ ಐದು ಎಕರೆ ಮಾತ್ರ ಬೆಳೆಯಬೇಕೆಂದಿರುವೆ. ಮಾಳಪ್ಪನವರ ಬಸವರಾಜ ರೈತ ಲಕ್ಷ್ಮೀಪುರ

ಬೀಜ ಖರೀದಿ ಕಡಿಮೆ ಆಗಿರುವುದು ಉತ್ತಮ ಬೆಳವಣಿಗೆ. ಬೇಡಿಕೆಗಿಂತ ಅಧಿಕವಾಗಿ ಒಂದೇ ಬೆಳೆಯ ಮೇಲೆ ಅವಲಂಬನೆ ಸರಿಯಲ್ಲ. ತೊಗರಿ, ನವಣೆ, ಮೆಕ್ಕೆಜೋಳ ಸೇರಿ ಇತರ ಬೆಳಯ ಬಗ್ಗೆಯೂ ರೈತರು ಆಸಕ್ತಿ ಬೆಳಸಿಕೊಂಡಾಗ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ನಷ್ಟ ಅನುಭವಿಸುವುದು ತಪ್ಪುತ್ತದೆ. ವಸಂತ್ ಕುಮಾರ್ ಎಡಿ ಕೃಷಿ ಇಲಾಖೆ ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net