

ಶಿಗ್ಗಾಂವಿ: ಪ್ರಸ್ತುತ ಮುಂಗಾರು ಪೂರ್ವ ಮಳೆ ಬಯಲು ಸೀಮೆಯ ರೈತರಿಗೆ ಖುಷಿ ತಂದಿದ್ದು, ಬಿತ್ತನೆ ಚಟುವಟಿಕೆಗಳು ಗರಿಗೆದರಿವೆ. ಆದರೆ, ಒಂದು ವಾರದಿಂದ ಸುರಿಯುತ್ತಿರುವ ಜಡಿ ಮಳೆಗೆ ದುಂಡಶಿ ಹೋಬಳಿಯ ಸುಮಾರು 730 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದ ರೈತರು ಕಂಗಾಲಾಗಿದ್ದಾರೆ.
ಹೋಬಳಿಯ ಚಂದಾಪುರ, ಭದ್ರಾಪುರ, ನೀರಲಕಟ್ಟಿ, ಜಕ್ಕನಕಟ್ಟಿ, ಹೊಸೂರ, ಚಂದಾಪುರ, ಕೋಣನಕೇರಿ, ಯತ್ತಿನಹಳ್ಳಿ, ಮಮದಾಪೂರ, ಮಡ್ಲಿ ಗ್ರಾಮಗಳ ಹಲವು ರೈತರು ಎರಡು ತಿಂಗಳ ಹಿಂದೆ ಮೆಣಸಿನಕಾಯಿ ಸಸಿ ನಾಟಿ ಮಾಡಿದ್ದರು. ಬೆಳೆ ಹುಲುಸಾಗಿ ಬೆಳೆದಿದ್ದು, ಫಸಲು ಕಟಾವು ಮಾಡುವ ಹಂತದಲ್ಲಿದೆ. ಒಂದು ವಾರಕ್ಕೂ ಹೆಚ್ಚು ದಿನದಿಂದ ಸುರಿಯುತ್ತಿರುವ ಮಳೆಗೆ ಮೆಣಸಿನಕಾಯಿ ಗಿಡಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿವೆ. ಅತಿಯಾದ ತೇವಾಂಶದಿಂದಾಗಿ ಕಾಯಿಗಳು ನೆಲಕ್ಕುದುರುತ್ತಿವೆ. ಹೀಗಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ರೈತರ ಪರಿಸ್ಥಿತಿ.
ಎಕರೆಗೆ ಕನಿಷ್ಠ 30ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಸಮೃದ್ಧವಾಗಿ ಬೆಳೆದಿದ್ದ ಮೆಣಸಿನಕಾಯಿ ಗಿಡದಲ್ಲಿನ ಕಾಯಿಗಳು ಮಳೆಯಿಂದ ಉದುರಿ, ಎಲೆಗಳಿಲ್ಲದೆ ಬೋಳಾಗಿ ನಿಂತಿವೆ. ಇದರಿಂದಾಗಿ ಮಾಡಿದ ಖರ್ಚು ವಾಪಸ್ ಬಾರದಂತಾಗಿದೆ. ಸರ್ಕಾರ ಮೆಣಸಿನಕಾಯಿ ಬೆಳೆದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ.
ದರ ಕುಸಿತ: ಮೆಣಸಿನಕಾಯಿ ದರ ಫೆಬ್ರವರಿ ಇತ್ತೀಚಿನವರೆಗೆ ಕ್ವಿಂಟಾಲ್ಗೆ 6ರಿಂದ 7 ಸಾವಿರ ರೂಪಾಯಿ ಇತ್ತು. ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಬೆಲೆ ಕುಸಿದು 2ರಿಂದ 3 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಮಳೆ ಹಾಗೂ ದರ ಕುಸಿತವು ಉತ್ತಮ ಫಸಲು, ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಉಂಟು ಮಾಡಿದೆ.
ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ, ಎಣ್ಣೆ, ಗೊಬ್ಬರ ಹಾಕಿದ್ದೇನೆ. ಉತ್ತಮ ಇಳುವರಿ ಜತೆಗೆ ದೊಡ್ಡ ಆದಾಯದ ನಿರೀಕ್ಷೆಯಲ್ಲಿದ್ದೆವು. ಹಸಿಕಾಯಿ ಹರಿಯುವ ಹಂತದಲ್ಲಿ ಮಳೆ ಸುರಿಯುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. | ಕಂಟೆಪ್ಪ ಲಮಾಣಿ, ಮಮದಾಪೂರ ಗ್ರಾಮದ ರೈತ ಸತತ ಮಳೆಯಿಂದ ತೇವಾಂಶ ಹೆಚ್ಚಾಗಿರುವ ಕಾರಣ ಮೆಣಸಿನಕಾಯಿ ಉದುರಿ ರೈತರಿಗೆ ನಷ್ಟವಾಗುತ್ತಿದೆ. ರೈತರಿಗೆ ಪರಿಹಾರ ನೀಡುವ ಕುರಿತು ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಪರಿಹಾರ ಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. | ಕಿಶೋರ ನಾಯ್ಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿಗ್ಗಾಂವಿ ಮೆಣಸಿನಕಾಯಿ ಬೆಳೆ ಹಾನಿ ಕುರಿತು ಈಗಾಗಲೇ ಅಧಿಕಾರಿಗಳ ಜತೆಗೆ ಜಮೀನಿಗೆ ಭೇಟಿ ನೀಡಿ ಹಾನಿ ಪರಿಶೀಲಿಸಲಾಗಿದೆ. ಮೆಣಸಿನಕಾಯಿ ಹಾನಿಯಾದ ರೈತರು ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ದಾಖಲೆಗಳನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. | ರವಿಕುಮಾರ ಕೊರವರ, ತಹಸೀಲ್ದಾರ್ ಶಿಗ್ಗಾಂವಿ