

ಬೆಂಗಳೂರು: ಮಾರಣಾಂತಿಕ ಕಾಯಿಲೆಗಳಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಇಬ್ಬರು ಬಾಲಕರ ಇಚ್ಛೆಯಂತೆ ‘ಪೊಲೀಸ್ ಅಧಿಕಾರಿ’ ಆಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಆಗ್ನೇಯ ವಿಭಾಗದ ಪೊಲೀಸರು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಹೊಸೂರು ಮೂಲದ ಮಿಥಿಲೇಶ್ (14) ಮತ್ತು ಕೇರಳ ಮೂಲದ ಮೊಹಮ್ಮದ್ ಸಲ್ಮಾನ್ (13) ಮಾರಣಾಂತಿಕ ಕಾಯಿಲೆಯಿಂದ ಕಿದ್ವಾಯಿ ಮತ್ತು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಗಳಾಗಬೇಕು ಎಂಬ ಕನಸು ಕಂಡಿದ್ದವರು. ಬಾಲಕರ ಬಗ್ಗೆ ‘ಮೇಕ್ ಎ ವಿಷ್ ಫೌಂಡೇಷನ್’ ಮುಖ್ಯಸ್ಥರು ಆಗ್ನೇಯ ವಿಭಾಗ ಡಿಸಿಪಿ ಸಿ. ಕೆ. ಬಾಬಾ ಗಮನಕ್ಕೆ ತಂದಿದ್ದರು. ಗುರುವಾರ ಮಿಥಿಲೇಶ್ ಮತ್ತು ಮೊಹಮ್ಮದ್‌ಗೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
ಮಧ್ಯಾಹ್ನ 12 ಗಂಟೆಗೆ ಸಮವಸ್ತ್ರದಲ್ಲಿ ಬಂದ ಮಿಥಿಲೇಶ್ ಮತ್ತು ಮೊಹಮ್ಮದ್ ಅವರನ್ನು ಡಿಸಿಪಿ ಸಿ.ಕೆ. ಬಾಬಾ ಬರಮಾಡಿಕೊಂಡರು. ಬಾಲಕರು ನೇರ ಆಗ್ನೇಯ ವಿಭಾಗ ಡಿಸಿಪಿ ಕಚೇರಿಗೆ ಹೋಗಿ ಅಧಿಕಾರ ವಹಿಸಿಕೊಂಡು ಅರ್ಧ ತಾಸು ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ಮಕ್ಕಳ ಆಸೆ ಈಡೇರಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ವಿಶೇಷ ಮಕ್ಕಳು ಪೊಲೀಸ್ ಅಧಿಕಾರಿ ಆಗಬೇಕೆಂದು ಆಸೆಪಟ್ಟವರು. ಅವರ ಕನಸು ನನಸು ಮಾಡುವ ಪ್ರಯತ್ನ ಮಾಡಲಾಗಿದೆ. | ಸಿ.ಕೆ. ಬಾಬಾ ಆಗ್ನೇಯ ವಿಭಾಗ ಡಿಸಿಪಿ
ಆನಂತರ ಕೋರಮಂಗಲ ಠಾಣೆಗೆ ತೆರಳಿ ಇನ್‌ಸ್ಪೆಕ್ಟರ್ ಆಗಿ ಗೌರವ ಸ್ವೀಕರಿಸಿದರು. ಸ್ಟೇಷನ್ ಡೈರಿ ಪರಿಶೀಲನೆ ನಡೆಸಿದರು. ಆನಂತರ ಕೈಕೋಳ, ಲಾಕಪ್, ಸಶಸ್ತ್ರಗಳನ್ನು ಪರಿಶೀಲನೆ ನಡೆಸಿ 2 ತಾಸುಗಳ ಕಾಲ ಠಾಣಾಧಿಕಾರಿಯಾಗಿ ಅಧಿಕಾರ ಚಲಾಯಿಸಿದ ದೃಶ್ಯ ಕಂಡು ಬಂತು.
ಈ ವೇಳೆ ಮಾತನಾಡಿದ ಮಿಥಿಲೇಶ್, ‘ತಮ್ಮ ಮನೆಯ ಸಮೀಪ ನಡೆದ ಗಲಾಟೆ ವೇಳೆ ಪೊಲೀಸರು ಬಂದು ನಿಯಂತ್ರಣ ಮಾಡಿದ ದೃಶ್ಯವನ್ನು ಕಂಡಿದ್ದೆ. ಅದಕ್ಕಾಗಿ ಪೊಲೀಸ್ ಆದರೆ ಅಪರಾಧಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸಬಹುದು ಎಂಬ ಆಸೆ ಹೊಂದಿದ್ದೆ' ಎಂದು ಮನದಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ.
ಇದೇ ವೇಳೆ ಮೊಹಮ್ಮದ್ ಸಲ್ಮಾನ್ ಮಾತನಾಡಿ, 'ಎರಡು ವರ್ಷಗಳ ಹಿಂದೆ ಕೇರಳದಲ್ಲಿ ಮಳೆ ಸುರಿದು ಸೇತುವೆ ನಾಶವಾಗಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಸೇತುವೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅಂದು ನಾನು ಪೊಲೀಸ್ ಅಧಿಕಾರಿಯಾಗಿ ಸಾರ್ವಜನಿಕರ ಸೇವೆ ಸಲ್ಲಿಸಬೇಕೆಂದು ಕನಸು ಕಂಡಿದ್ದೆ' ಎಂದು ಮೊಹಮ್ಮದ್ ಸಲ್ಮಾನ್ ತಿಳಿಸಿದ್ದಾರೆ.