ಮಕ್ಕಳ ತೂಕದಷ್ಟು ಕೆಂಪು ಸಕ್ಕರೆ ಹರಕೆ

15mnv01
Published on

ಮಾನ್ವಿ: ಪಟ್ಟಣದ ಕೋನಾಪುರಪೇಟೆಯ ಅಗಸೆ ಹತ್ತಿರ ಮೊಹರಂ ಏಳನೇ ದಿನದಂದು ಇಮಾಮ್ ಖಾಸಿಂ ಪೀರಲ ದೇವರನ್ನು ಕೂರಿಸಿದ್ದು ಭಕ್ತರು ದೇವರಿಗೆ ಕೆಂಪು ಸಕ್ಕರೆ ಅರ್ಪಿಸಿ ಭಕ್ತಿ ಮೆರದರು.

ಹುಸೇನಿ ಆಲಂ ಪೀರಲ ದೇವರನ್ನು ಸ್ಥಳೀಯರು ಸಿಟ್ಟಿನ ದೇವರು ಎಂದೆ ಕರೆಯುತ್ತಾರೆ. 300 ವರ್ಷಗಳ ಹಿಂದೆ ಹೂಗಾರ ಸಮುದಾಯದ ಅಮರಮ್ಮ ಅವರಿಗೆ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರಾ ನದಿಯಲ್ಲಿ ದೊರೆತ ಎರಡು ಪೀರಲ ದೇವರುಗಳನ್ನು ಪಟ್ಟಣದ ಸೈಯದ್ ಹುಸೇನ್ ಸಾಹೇಬರಿಗೆ ನೀಡಿದ್ದರು. ನಂತರ ಪಟ್ಟಣದ ಜನರ ನೆರವಿನೊಂದಿಗೆ ಮಸೀದಿ ನಿರ್ಮಾಣ ಮಾಡಿ ಹುಸೇನ್ ಆಲಂ, ಬಾರ ಇಮಾಮ್ ಪೀರಲ ದೇವರುಗಳನ್ನು ಕೂಡಿಸಿ ಮೊಹರಂ ಆಚರಣೆ ಮಾಡಲಾಗುತ್ತಿತ್ತು. ನಂತರ ಚೋಟಿ ಬೋಲಿವಾಲೆ, ಬಡೆ ಬೋಲಿವಾಲೆ, ಕರೆಮುಂಡಾಸ್, ತೀನ್ ಜಿಬೀವಾಲೆ, ಹಿಂದು ಭಕ್ತರು ನೀಡಿದ ಚೌಡಪ್ಪ ಸೇರಿದಂತೆ ಒಟ್ಟು 7 ಪೀರಲ ದೇವರನ್ನು ಕೂಡಿಸಲಾಗುತ್ತದೆ.

ಸಂತಾನಕ್ಕಾಗಿ ಹರಕೆ ಹೊತ್ತವರು ಮೊಹರಂ ಸಮಯದಲ್ಲಿ ಮಕ್ಕಳ ತೂಕದಷ್ಟು ಕೆಂಪು ಸಕ್ಕರೆಯನ್ನು ನೀಡುತ್ತಾರೆ. ಕೆಲವರು ಬೆಳ್ಳಿಯ ತೊಟ್ಟಿಲು ಹಾಗೂ ಬೆಳ್ಳಿಯ ಕುದುರೆಯನ್ನು ಪೀರಲ ದೇವರುಗಳಿಗೆ ಕಟ್ಟುವ ಮೂಲಕ ಹರಕೆ ತೀರಿಸುತ್ತಾರೆ. ತೆಂಗಿನಕಾಯಿ ಒಡೆಯುವುದು, ದೀಪ ಹಚ್ಚುವುದು, ಒಣ ಕೊಬ್ಬರಿ ನೀಡುವ ಮೂಲಕ ಹರಕೆ ತೀರಿಸುತ್ತಾರೆ.

ಹುಸೇನ್ ಆಲಂ ಮಸೀದಿಯ ಆಡಳಿತಾಧಿಕಾರಿ ಸಾಜೀದ್‌ಖಾದ್ರಿ ಮುತಾವಲ್ ಮಾತನಾಡಿ, ನಮ್ಮ ಪೀರಲು ದೇವರು ವಕ್ಫ್ ಮಂಡಳಿಗೆ ಸೇರಿದೆ. ಪಟ್ಟಣದಲ್ಲಿ ಎಲ್ಲ ಸಮುದಾಯದವರು ಸೇರಿ ಮೊಹರಂ ಆಚರಿಸಿಕೊಂಡು ಬಂದಿದ್ದಾರೆ. ಮಸೀದಿಯ ಗೋಪುರವನ್ನು ಯಾದವ ಸಮುದಾಯದವರು ಕಟ್ಟಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net