ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

LIONS
Published on

ನರಗುಂದ: ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿದರೆ ಉತ್ತಮ ನಾಗರಿಕರನ್ನಾಗಿ ರೂಪಿಸಲು ಸಾಧ್ಯವಿದೆ. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಿಪಿಐ ಮಲ್ಲಯ್ಯ ಮಠಪತಿ ಹೇಳಿದರು.

ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ವಿಜ್ಞಾನ ಕೇಂದ್ರಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಗುರಿಗೆ ನಿರಂತರ ಮಾರ್ಗದಶನ ನೀಡಿದರೆ ಅವರು ಜೀವನದಲ್ಲಿ ಶಸ್ಸು ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಗುರುಗಳಿಗೆ, ತಂದೆ-ತಾಯಿಗಳಿಗೆ ಗೌರವ ನೀಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಬೇಕು. ನೈತಿಕ ಮೌಲ್ಯಗಳನ್ನು, ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕು ಎಂದರು.

ಶಾಲಾ ಸಂಸತ್ ಸದಸ್ಯರಿಗೆ ಶಿಕ್ಷಣ ಸಂಸ್ಥೆ ಹಿರಿಯ ನಿರ್ದೇಶಕ ಜಿ.ಬಿ.ಕುಲಕರ್ಣಿ ಪ್ರಮಾಣ ವಚನ ಬೋಧಿಸಿದರು. ನಿವೃತ್ತ ಪ್ರಾಚಾರ್ಯ ಸಿ.ಎಸ್.ಸಾಲೂಟಗಿಮಠ ಇತರರಿದ್ದರು. ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಪ್ರದರ್ಶನ ನಡೆದವು. ಶ್ವೇತಾ ಬೂಸಪ್ಪನವರ, ಭವಾನಿ ಹಣಗಿ ಪ್ರಾರ್ಥಿಸಿದರು. ಶಾಲೆಮುಖ್ಯೋಪಾಧ್ಯಾಯ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಶ್ರಧ್ಧಾ ಮುಧೋಳೆ, ದಾನೇಶ್ವರಿ ರಾವತ್ ನಿರೂಪಿಸಿದರು. ನವ್ಯಾಬನಹಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net