

ಕಂಪ್ಲಿ: ಮಕ್ಕಳು ಅವರಿಷ್ಟದ ರಂಗದಲ್ಲಿ ಬೆಳವಣಿಗೆ ಹೊಂದಲು ಪ್ರೋತ್ಸಾಹದ ಅಗತ್ಯವಿದೆ ಎಂದು ಸುನ್ನಿ ಸ್ಟೂಡೆಂಟ್ ಫೆಡರೇಷನ್(ಎಸ್‌ಎಸ್‌ಎಫ್) ಜಿಲ್ಲಾಧ್ಯಕ್ಷ ಆಸೀಫ್ ರಿಫೈ ಹೇಳಿದರು.
ಇಲ್ಲಿನ ಕಂಪ್ಲಿ ಕೋಟೆಯ ಹಿಸಾನ್ ಮದರಸದಲ್ಲಿ ಎಸ್‌ಎಸ್‌ಎಫ್ ಜಿಲ್ಲಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯದಲ್ಲಿಯೇ ಸಾಹಿತ್ಯ, ಸಂಗೀತ ಸೇರಿ ವಿವಿಧ ಕೌಶಲಗಳನ್ನು ಪ್ರೇರೇಪಿಸಲು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
ಕಂಪ್ಲಿ, ಬಳ್ಳಾರಿ, ಸಿರುಗುಪ್ಪ ವಲಯಗಳ 65ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದು, ಕವಿತೆ ವಾಚನ, ಭಾಷಣ, ದೇಶಭಕ್ತಿ ಗೀತೆ ಹಾಡುವುದು, ಚಿತ್ರಕಲೆ, ಕಥೆ ವಾಚನ ಸೇರಿ 30ಕ್ಕೂ ಅಧಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಮಕ್ಕಳು ನ.16ರಿಂದ ಎರಡು ದಿನ ಕೊಡುಗು ಜಿಲ್ಲೆಯ ಕೊಂಡಂಗೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮದರಸ ಶಿಕ್ಷಕ ಉಮರ್ ಫಾರೂಖ್ ಹಿಮಮಿ, ಸಿದ್ದೀಕ್ ಸುಖಾಫಿ, ಇಲಿಯಾಸ್ ಆಫಿಯಾನ್ ಷರೀಫ್ ಮರಜೂಕಿ, ಮಹ್ಮದ್ ಈಕಮಿ ಕಪ್ಪಗಲ್, ಅಹ್ಮದ್‌ಸಾಬ್, ಲಡ್ಡು ಹೊನ್ನೂರವಲಿ, ಮಹ್ಮದ್ ಸಾಹಿಲ್, ಕೆ.ಮಹಮ್ಮದ್ ಮೊಜಿದ್ ಇತರರಿದ್ದರು.