

ಹುನಗುಂದ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದು ವಿದ್ಯಾನಗರ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಎಸ್.ಎಚ್. ಹುನಗುಂದ ಹೇಳಿದರು.
ಪಟ್ಟಣದ ವಿದ್ಯಾನಗರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಆಧುನಿಕ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿರುವ ನಾವುಗಳು ಮನೆಯಲ್ಲೇ ಕುಳಿತು ನಿತ್ಯ ಬಳಸುವ ದಿನಸಿ ಪದಾರ್ಥ ಸೇರಿ ಸೇವಿಸುವ ಆಹಾರ, ಉಡುವ ಬಟ್ಟೆಯವರಿಗೂ ಆನ್‌ಲೈನ್ ಶಾಪಿಂಗ್ ಮಾಡುತ್ತೇವೆ. ಇದರಿಂದ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬರಲು ಸಾಧ್ಯವಿಲ್ಲ. ನೇರ ಮಾರುಕಟ್ಟೆಯ ವ್ಯವಸ್ಥೆ, ವ್ಯಾಪಾರ ವಹಿವಾಟಿನಲ್ಲಿ ಚೌಕಾಸಿ, ವಸ್ತುವಿನ ಬೆಲೆ ಬಗ್ಗೆ ತಿಳಿಯಲು ಇಂತಹ ಮಕ್ಕಳ ಸಂತೆ ಬಹಳ ಉಪಯುಕ್ತವಾಗಿವೆ ಎಂದು ತಿಳಿಸಿದರು.
ಮಕ್ಕಳು ಮನೆಯಿಂದ ತಂದ ವಿವಿಧ ತರಕಾರಿ, ದಿನಸಿ ವಸ್ತುಗಳು, ಹೋಟೆಲ್‌ಗಳಲ್ಲಿ ತಯಾರಿಸು ಆಹಾರಗಳಾದ ದೋಸೆ, ಇಡ್ಲಿ ವಡೆ, ಅನ್ನ ಸಾಂಬಾರು, ಬಜಿ, ಗಿರಿಮಿಟ್ಟು, ಜಾಮೂನು ಮತ್ತಿತರ ವಸ್ತುಗಳನ್ನು ಸಂತೆಯಲ್ಲಿ ಮಾರುತ್ತಿರುವುದು ಕಂಡು ಬಂದಿತು. ಪಾಲಕರು, ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಖುಷಿಪಟ್ಟರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್‌ಡಿಎಂಸಿ ಸದಸ್ಯ ವಿರುಪಾಕ್ಷಿ ಮುಚಖಂಡಿ, ದೈಹಿಕ ಶಿಕ್ಷಕ ಎನ್.ಎಂ. ರೋಣದ, ಸಹ ಶಿಕ್ಷಕರಾದ* ಎಸ್.ಎಚ್. ಗಾಣಿಗೇರ, ಎಂ. ಬಿ. ಹೊರಗಿನಮಠ, ಎಸ್.ಎಸ್. ಹೊಸಮನಿ, ಎಸ್. ಬಿ. ಲೋಕಾಪುರ, ಎಲ್.ಎಸ್. ಮೇಟಿ, ಎಸ್.ಎಸ್. ಮೇಟಿ ಇತರರಿದ್ದರು.