ಮಕ್ಕಳ ಜಾಣ್ಮೆ ಗುರುತಿಸಲು ಮಕ್ಕಳ ಸಂತೆ ಸಹಕಾರಿ

31hgr 02
ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪಾಲಕರು ವಿದ್ಯಾರ್ಥಿಗಳು ಮಾಡಿದ ಪದಾರ್ಥಗಳನ್ನು ಖರೀದಿ ಮಾಡಿದರು.
Published on

ಹಲಗೂರು: ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳ ಜಾಣ್ಮೆಯನ್ನು ಗುರುತಿಸಲು ಶಾಲೆಯಲ್ಲಿ ನಡೆಯುವ ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದು ಶ್ರೀ ಸ್ವಾಮಿ ವಿದ್ಯಾಸಂಸ್ಥೆಯ ಖಜಾಂಜಿ ಕೇಶವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಜೆ.ಪಿ.ಎಂ. ಶಾಲಾವರಣದಲ್ಲಿ ವಿದ್ಯಾರ್ಥಿಗಳು ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷದಿಂದ ನಮ್ಮ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಮಕ್ಕಳು ತುಂಬ ಉತ್ಸಾಹದಿಂದ ಮನೆಯಿಂದಲೇ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ. ಆಹಾರ ಹೇಗೆ ತಯಾರು ಮಾಡಬೇಕು, ಅದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ತಿಳಿವಳಿಕೆ, ಶುಚಿ-ರುಚಿಯ ಬಗ್ಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ಮುಖ್ಯ ಶಿಕ್ಷಕ ಮಧುಸ್ವಾಮಿ ಮಾತನಾಡಿ, ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಹತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಂದರೆ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದರು.

ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸುಗಳು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪಾಲಕರು ಮಕ್ಕಳು ತಯಾರಿಸಿದ ಪದಾರ್ಥಗಳ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತರಕಾರಿ , ತಂಪು ಪಾನೀಯ, ಪಾನಿಪುರಿ, ಬೇಲ್ ಪುರಿ, ಸೊಪ್ಪು ಇತರ ಪದಾರ್ಥಗಳನ್ನು ಮಾರಾಟ ಮಾಡಿದರು.

ಸಂಸ್ಥೆಯ ಸಂಸ್ಥಾಪಕ ದೇವೇಗೌಡ, ಖಜಾಂಜಿ ಕೇಶವ್, ಸಹ ಶಿಕ್ಷಕ ಮಧು, ಶಿಕ್ಷಕರಾದ ಗೋವಿಂದರಾಜು, ರಾಜೇಶ್ವರಿ, ಶ್ರುತಿ, ಮೋನಿಷಾ, ಅರ್ಪಿತಾ, ವೆಂಕಟೇಶ್, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net