ಯಕ್ಷಗಾನ, ತಾಳಮದ್ದಲೆಯಿಂದ ಮಕ್ಕಳಿಗೆ ಸಂಸ್ಕಾರ

YLP SAMVAD
Published on

ಯಲ್ಲಾಪುರ: ಆಧುನಿಕತೆಯ ಮೋಹಕ್ಕೆ ಸಿಲುಕಿ ಸಂಸ್ಕಾರದಿಂದ ದೂರವಾಗುತ್ತಿರುವ ಯುವಜನರು ಹಾಗೂ ಮಕ್ಕಳನ್ನು ಸಂಸ್ಕಾರದ ಚೌಕಟ್ಟಿನೊಳಗೆ ತರಲು ಯಕ್ಷಗಾನ, ತಾಳಮದ್ದಲೆಯಂತಹ ಕಲೆಗಳು ಅತ್ಯವಶ್ಯಕ ಎಂದು ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ತಾಲೂಕಿನ ಹಸರಪಾಲ ಯಕ್ಷ ಸಂಸ್ಕೃತಿ ಪರಿವಾರದ ಆವಾರದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಮಾಗೋಡ, ಪ್ರೇರಣಾ ಸಂಸ್ಥೆ ಗುಂದ ಸಹಯೋಗದಲ್ಲಿ ಆಯೋಜಿಸಿದ್ದ ‘ಸಂವಾದ ಪಂಚಕ’ ತಾಳಮದ್ದಲೆ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್​ಫೋನ್, ಟಿವಿ, ಇತರ ಆಧುನಿಕತೆಯ ಮೋಹಕ್ಕೆ ಸಿಲುಕಿ ಬದುಕನ್ನೇ ನಾಶ ಮಾಡಿಕೊಂಡವರು ಅನೇಕರಿದ್ದಾರೆ. ಅದನ್ನು ತಡೆಯಲು ಯಕ್ಷ ಸಂಸ್ಕಾರ ಉತ್ತಮ ಔಷಧವಾಗಿದೆ ಎಂದರು.

ಹಿರಿಯ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ, ರಾಧಾಕೃಷ್ಣ ಕಲ್ಚಾರ ವಿಟ್ಲ, ಅರ್ಥಧಾರಿ ಡಾ.ಮಹೇಶ ಭಟ್ಟ ಇಡಗುಂದಿ, ಸಂಘಟಕರಾದ ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಕುಂಕಿಮನೆ, ಇತರರಿದ್ದರು. ಮಹೇಶ ಭಟ್ಟ ಹಾಗೂ ಪಂಚಮಿ ಹಸರಪಾಲ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net