

ಪುತ್ತೂರು ಗ್ರಾಮಾಂತರ: ಅಂಗನವಾಡಿ ಕೇಂದ್ರದೊಳಗೆ ಹಾವುಗಳು ಬರುತ್ತಿರುವುದರಿಂದ ಕುಳಿತುಕೊಳ್ಳಲು ಹೆದರಿಕೆಯಾಗುತ್ತಿದೆ. ಬೀದಿ ನಾಯಿಗಳು ಶಾಲಾ ಆವರಣದೊಳಗೆ ಬೀಡು ಬಿಡುತ್ತಿವೆ. ಶಾಲಾ ಕ್ರೀಡಾಂಗಣಕ್ಕೆ ಆಟವಾಡಲು ಬರುವ ಹೊರಗಿನವರು ಶಾಲಾ ಪೈಪ್ಲೈನ್, ಕಿಟಕಿ ಗಾಜಿಗೆ ಹಾನಿ ಮಾಡುತ್ತಿದ್ದಾರೆ, ಪ್ರತಿ ಶಾಲೆಗೆ ನ್ಯಾಪ್ಕಿನ್ ಬರ್ನರ್ ಬೇಕು, ಹೆಚ್ಚುವರಿ ಶೌಚಗೃಹ ವ್ಯವಸ್ಥೆಯಾಗಬೇಕು. ಶಾಲಾ ಬಳಿಯಿರುವ ಅಪಾಯಕಾರಿ ಮರ ತೆರವುಗೊಳಿಸಬೇಕು...ಮೊದಲಾದ ಬೇಡಿಕೆಗಳನ್ನು ಒಳಮೊಗ್ರು ಗ್ರಾ.ಪಂ.ನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಮುಂದಿಟ್ಟರು.
ಕುಂಬ್ರದ ಕೆಪಿಎಸ್ ಸಭಾಂಗಣದಲ್ಲಿ ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ನಡೆಯಿತು.
ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಗ್ರಾ.ಪಂ. ವ್ಯಾಪ್ತಿಯ 6 ಶಾಲೆಗಳ ಆಯ್ದ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಮತ್ತು ಬೇಡಿಕೆ ಮುಂದಿಟ್ಟು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆದರು.
ಬೀದಿ ನಾಯಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ನಾಯಿಗಳು ಶಾಲಾ ಆವರಣದೊಳಗೆ ಬಂದು ಬೀಡುಬಿಟ್ಟು ಗಲೀಜು ಮಾಡುತ್ತಿವೆ. ನಾಯಿಗಳ ಉಪಟಳದಿಂದ ಭಯವಾಗುತ್ತಿದೆ ಎಂದು ಕುಂಬ್ರ ಕೆಪಿಎಸ್, ದರ್ಬೆತ್ತಡ್ಕ ಮತ್ತು ಕುಟ್ಟಿನೋಪಿನಡ್ಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹೇಳಿದರು. ಕುಂಬ್ರ ಕೆಪಿಎಸ್ನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದರು. ಶಾಲಾ ಮೈದಾನಕ್ಕೆ ಹೊರಗಿನವರು ಆಟವಾಡಲು ಬಂದು ಶಾಲೆಯ ಕಿಟಕಿ ಗಾಜು, ನೀರಿನ ಪೈಪ್ಲೈನ್ಗೆ ಹಾನಿ ಮಾಡುತ್ತಿದ್ದಾರೆ ಎಂದು ಕುಂಬ್ರ ಕೆಪಿಎಸ್, ಪರ್ಪುಂಜ ಮತ್ತು ಕುಟ್ಟಿನೋಪಿನಡ್ಕ ಶಾಲಾ ವಿದ್ಯಾರ್ಥಿಗಳು ದೂರಿದರು. ಬೀಟ್ ಪೊಲೀಸರು ಶಾಲೆಗೆ ಆಗಾಗ ಬರುತ್ತಿರಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಮಕ್ಕಳ ಬೇಡಿಕೆ ಮತ್ತು ಮನವಿಗಳನ್ನು ದಾಖಲಿಸಿಕೊಳ್ಳಲಾಯಿತು. ಕುಂಬ್ರ ಕೆಪಿಎಸ್ನ ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಗಮನಹರಿಸಿ ಕೂಡಲೇ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು. ಉಳಿದಂತೆ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಪಂಚಾಯಿತಿಯಿಂದ ಸಾಧ್ಯವಾಗುವ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಆರತಿ, ಮೆಸ್ಕಾಂ ಇಲಾಖೆಯ ರವೀಂದ್ರ, ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾಶ್ರೀ, ಬೀಟ್ ಪೊಲೀಸ್ ಅಧಿಕಾರಿ ಶರಣಪ್ಪ ಎಚ್.ಪಾಟೀಲ್, ಇಲಾಖೆಗಳಿಗೆ ಸಂಬಂಧಿಸಿದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ಶೀನಪ್ಪ ನಾಯ್ಕ, ಚಿತ್ರಾ.ಬಿ.ಸಿ, ರೇಖಾ ಯತೀಶ್, ಶಾರದಾ, ಸುಂದರಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಂತಿ ವಂದಿಸಿದರು.
73 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಒಳಮೊಗ್ರು ಗ್ರಾ.ಪಂ. ವ್ಯಾಪ್ತಿಯ 6 ಶಾಲೆಗಳ ಒಟ್ಟು 73 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಕ್ಕಳ ಗ್ರಾಮಸಭೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ರಸಪ್ರಶ್ನೆ, ದೇಶ ಭಕ್ತಿಗೀತೆ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.