

ಸಂಡೂರು: ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ ಗ್ರಾಪಂ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲಿನ ದೌರ್ಜನ್ಯ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಕ್ರಿಯಾಯೋಜನೆ ರೂಪಿಸಬೇಕು ಎಂದು ತಾಪಂ ಪ್ರಭಾರ ಇಒ ರೇಣುಕಾಚಾರ್ಯಸ್ವಾಮಿ ಹೇಳಿದರು.
ತಾಪಂ ಕಚೇರಿಯಲ್ಲಿ ರೀಡ್ಸ್ ಸಂಸ್ಥೆ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಪಿಡಿಒಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು. ದೇಶದಲ್ಲಿ ಜನಸಂಖ್ಯೆಯ ಶೇ.40 ಮಕ್ಕಳಿದ್ದಾರೆ. ಪ್ರತಿ ಮಗುವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಮಕ್ಕಳ ರಕ್ಷಣೆಗಾಗಿ ವಿವಿಧ ಕಾಯ್ದೆಗಳಿದ್ದು, ಪ್ರತಿ ಮಗುವಿನ ಬಾಲ್ಯ ರಕ್ಷಣೆ, ಶಿಕ್ಷಣ ಕಲಿಯುವುದು, ಗೌರವದಿಂದ ಜೀವಿಸುವುದು ಮಕ್ಕಳ ಹಕ್ಕು ಆಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪ್ರಕರಣಗಳು ಹೆಚ್ಚಾಗುತ್ತಿರುವುದು ಶೋಚನೀಯ. ಇದನ್ನು ತಡೆಯಲು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸುವರ್ಣ ಸಂಡೂರು ನಿರ್ಮಾಣಕ್ಕೆ ಸಹಕರಿಸಿ ಎಂದು ಇಒ ಕೋರಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂಪನ್ಮೂಲ ವ್ಯಕ್ತಿ ಎಚ್.ಸಿ.ರಾಘವೇಂದ್ರ ಮಕ್ಕಳ ಹಕ್ಕುಗಳು, ಸುಸ್ಥಿರ ಅಭಿವೃದ್ಧಿ ಗುರಿಗಳು, ಬಾಲ್ಯವಿವಾಹ ನಿಷೇಧ, ಕರ್ನಾಟಕ ತಿದ್ದುಪಡಿ ಕಾಯ್ದೆ, ಪೋಕ್ಸೊ ಕಾಯ್ದೆ ಬಗ್ಗೆ ತರಬೇತಿ ನೀಡಿದರು.