ಮೌಲ್ಯಯುತ ಶಿಕ್ಷಣವಿಲ್ಲದೆ ಮಕ್ಕಳ ಮನಸ್ಥಿತಿ ಹಾಳು

10
Published on

ಮೈಸೂರು: ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಮೌಲ್ಯಾಧಾರಿತ ಶಿಕ್ಷಣವಿಲ್ಲದೆ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಹಾಳಾಗಿದೆ. ಅವರಿಗೆ ದೇಶದ ಬಗ್ಗೆ ಚಿಂತನೆ ಇಲ್ಲವಾಗಿದೆ. ಸಂಪಾದನೆ ಹಾಗೂ ವೈಯಕ್ತಿಕ ಏಳಿಗೆಯೇ ಮುಖ್ಯವಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ಸತ್ಯನಾರಾಯಣ ಬೇಸರವ್ಯಕ್ತಪಡಿಸಿದರು.
ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ ಮಾತನಾಡಿ, ಇಂದಿನ ವಿದ್ಯೆಯು ಪರಿಪೂರ್ಣವಾಗಿಲ್ಲ. ವಿಜ್ಞಾನ, ಉದ್ಯೋಗ, ವಿಕಾಸ ಶಿಕ್ಷಣದ ಧ್ಯೇಯವಾಗಬೇಕಿತ್ತು. ವಿಜ್ಞಾನದ ಮಿತಿ ಮೀರಿದ ಬೆಳವಣಿಗೆ ಅಪಾಯಕಾರಿಯಾಗಿದೆ. ಆತ್ಮಜ್ಞಾನವಿಲ್ಲದ ವಿಜ್ಞಾನದಿಂದ ಅವನತಿಯೇ ಹೆಚ್ಚು ಎಂದು ಎಚ್ಚರಿಸಿದರು.
ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಅರ್ಜಿ ಹಿಡಿದು ಅಲೆಯದೆ, ಸ್ವಯಂ ಉದ್ಯೋಗ ಮಾಡುತ್ತಲೇ ಶಿಕ್ಷಣ ಪಡೆಯಬೇಕೆಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು ಎಂದು ಹೇಳಿದರು.
ಸ್ವದೇಶದಲ್ಲಿ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ವಿದೇಶದಲ್ಲಿ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾರೆ. ಸ್ವಾರ್ಥವನ್ನು ಬಿಟ್ಟು ದೇಶದ ಉನ್ನತಿಗಾಗಿ ದುಡಿಯುವಂತಾದರೆ ಭಾರತಕ್ಕೆ ಸ್ವರ್ಣಯುಗ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ದೇಶದ ಸ್ಥಿತಿಯನ್ನು ಅವಲೋಕಿಸಿದರೆ ದೇಶ ಉಳಿಸಿಕೊಳ್ಳುವ ಭರವಸೆ ಇಂದಿನ ಪೀಳಿಗೆಯಲ್ಲಿ ಕಾಣುತ್ತಿಲ್ಲ. ದೇಶಕ್ಕಾಗಿ ಯೋಚಿಸಬೇಕಾದ ರಾಜಕಾರಣಿಗಳು ಕುರ್ಚಿಗಾಗಿ ಹೊಡೆದಾಟ ನಡೆಸುತ್ತಿದ್ದಾರೆ. ಅಧಿಕಾರ ದಾಹವೇ ಅವರಿಗೆ ಮುಖ್ಯವಾಗಿದೆ ಎಂದರು.
ಹರಿಜನರ ಉದ್ಧಾರಕ್ಕೆ ಗಾಂಧಿಗೆ ಪ್ರೇರಣೆ ಏನು ಎಂಬ ಪ್ರಶ್ನೆಗೆ, ಆಫ್ರಿಕಾದಿಂದ ಬಂದ ಗಾಂಧಿ ದೇಶವನ್ನು ಅರಿಯಲು ಪರ್ಯಟನೆ ಮಾಡಿದರು. ಜಾತಿ ಪದ್ಧತಿ ನಿರ್ಮೂಲನೆ ಮಾಡದೆ ದೇಶದ ವಿಕಾಸ ಅಸಾಧ್ಯ ಎಂಬುದು ಅರಿವಾಯಿತೇ ಹೊರತು ಅಂಬೇಡ್ಕರ್ ಮೊದಲಾದ ಯಾವ ನಾಯಕರಿಂದಲೂ ಈ ವಿಷಯವಾಗಿ ಪ್ರಭಾವ ಇರಲಿಲ್ಲ ಎಂದು ಉತ್ತರಿಸಿದರು.
ಜಾತಿಪದ್ಧತಿಯಿಂದ ದೇಶ ವಿಭಜನೆ ಆಗುವ ಪರಿಸ್ಥಿತಿ ಇದೆ. ಸಂಕೋಲೆಗಳನ್ನು ಮೀರಿ ದೇಶಕ್ಕಾಗಿ ಒಗ್ಗೂಡದವರಿಂದ ರಾಷ್ಟ್ರಕ್ಕಾಗಿ ಏನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net