

ಧಾರವಾಡ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಅಕ್ಷರ ಪ್ರತಿಷ್ಠಾನ ಸಹಯೋಗದಲ್ಲಿ ತಾಲೂಕಿನ ಕೊಟಬಾಗಿ ಸರ್ಕಾರಿ ಶಾಲೆಯಲ್ಲಿ ಗ್ರಾಪಂ ಮಟ್ಟದ ಮಕ್ಕಳ ಗಣಿತ ಕಲಿಕಾ ಸ್ಪರ್ಧೆ ಇತ್ತೀಚೆಗೆ ಜರುಗಿತು.
ಗ್ರಾಪಂ ಅಧ್ಯಕ್ಷೆ ಶಕುಂತಲಾ ಭಂಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಣಿತ ಅತ್ಯಂತ ಕಠಿಣ ವಿಷಯ ಎಂಬ ತಪ್ಪು ಕಲ್ಪನೆ ಮಕ್ಕಳಲ್ಲಿದೆ. ಈ ಕಲ್ಪನೆಯಿಂದ ಅವರನ್ನು ಹೊರತರುವುದಲ್ಲದೆ, ಗಣಿತದಲ್ಲಿ ಪರಿಣಿತಿ ಹೊಂದುವಂತೆ ಮಾಡುವುದೇ ಈ ಸ್ಪರ್ಧೆಯ ಉದ್ದೇಶವಾಗಿದೆ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆರ್.ಎಂ. ಕುರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಅಧಿಕಾರಿ ಚಕ್ರಸಾಲಿ, ಎಸ್‌ಡಿಎಂಸಿ ಅಧ್ಯಕ್ಷ ಜಿನ್ನಪ್ಪನವರ, ಗ್ರಾಪಂ ಸದಸ್ಯ ಪ್ರಭಾಕರ ದೇಶಪಾಂಡೆ, ಮುಖ್ಯಾಧ್ಯಾಪಕ ರಾಜಗುರು ತಳವಾರ, ಕೊಟಬಾಗಿ, ಜೀರಿಗವಾಡ ಮತ್ತು ಕಲ್ಲೂರು ಶಾಲೆಗಳ ಮಕ್ಕಳು, ಸದಸ್ಯರು, ಪಾಲಕರು, ಭಾಗವಹಿಸಿದ್ದರು.