ಶಿಕ್ಷಕರಿಂದ ಮಕ್ಕಳ ಜೀವನ ಬದಲು

24 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾದರಿ ಶಿಕ್ಷಕರ ಪ್ರಭಾವದಿಂದ ಮಕ್ಕಳ ಜೀವನದ ಪಥ ಬದಲಿಸಲು ಸಾಧ್ಯ. ಹೀಗಾಗಿ ಶಿಕ್ಷಕರು ಆಳವಾದ ವಿಷಯ ಪ್ರಾವಿಣ್ಯತೆ ಹೊಂದಿ, ಮಕ್ಕಳಲ್ಲಿ ಹೊಸ ವಿಷಯಗಳತ್ತ ಆಸಕ್ತಿ ಮೂಡಿಸಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಪ್ರೊ. ಎಂ.ಎಸ್. ಶಿವಪ್ರಸಾದ ಅಭಿಪ್ರಾಯಪಟ್ಟರು.
ನಗರದ ಮಾಳಮಡ್ಡಿ ಕೆ.ಇ. ಬೋರ್ಡ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ಶಿಕ್ಷಕ-ಸಂಸ್ಥಾಪಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಠ್ಯಕ್ರಮಕ್ಕಿಂತ ಸಹಪಠ್ಯಗಳ ಜ್ಞಾನ ಅಗತ್ಯವಿದೆ. ವಿಜ್ಞಾನ, ತಂತ್ರಜ್ಞಾನದ ಕೌತುಕಗಳು ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ತರಬಲ್ಲವು. ಆಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕೆಗಳಿಂದ ಜೀವನ ಶೈಲಿ ಬದಲಾಗುತ್ತಿದೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಶಿಕ್ಷಕರು ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ಆಗ ಸಂಸ್ಥಾಪಕ ರೊದ್ದ ಶ್ರೀನಿವಾಸ ರಾವ್ ಅವರ ಶಿಕ್ಷಣದ ಆಶಯ ಈಡೇರಿದಂತಾಗುವುದು ಎಂದರು.
ಸಂಸ್ಥೆ ಅಧ್ಯಕ್ಷ ಪ್ರೊ. ಎಂ.ಎನ್.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿ ಹಾಗೂ ವಿಶೇಷ ಸಾಧನೆ ಮಾಡಿದ ಶಿಕ್ಷಕರನ್ನು ಸತ್ಕರಿಸಲಾಯಿತು.
ಡಿ.ಎಸ್.ರಾಜಪುರೋಹಿತ, ಆರ್.ಎ.ಸಿದ್ಧಾಂತಿ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಪಾಟೀಲ ನಿರೂಪಿಸಿದರು. ಎಸ್.ಎನ್. ಪರಾಂಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net