ಮಕ್ಕಳ ಮನಸ್ಸು ಅರಳಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ

21 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳ ಮನಸ್ಸನ್ನು ಅರಳಿಸಿ ಅದರಲ್ಲಿ ಕುತೂಹಲ ಕೆರಳಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ. ಈ ಸಾಹಿತ್ಯ ಮಕ್ಕಳ ಭಾವನೆ ಉದಾತ್ತಗೊಳಿಸುತ್ತದೆ ಎಂದು ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ. ಶರಣಬಸವ ಚೋಳಿನ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಕವಿ ಬಿ.ಕೆ. ಹೊಂಗಲ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ -2025 ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಕುರಿತು ಮಾತನಾಡಿದರು.

ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರುಗಳನ್ನು ಜಾನಪದ ಪರಂಪರೆಯಲ್ಲಿ ಕಾಣಬಹುದು. ಜಾನಪದ ಪರಂಪರೆಯ ಗೋವಿನ ಹಾಡು, ಪಂಜೇ ಮಂಗೇಶರಾಯರ ಹಾಡು ಇಂದಿಗೂ ಮಕ್ಕಳನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಈಸೋಪನ ನೀತಿ ಕಥೆಗಳು ಮಕ್ಕಳಲ್ಲಿ ಉದಾತ್ತ ಚಿಂತನೆ, ನೈತಿಕ ಮೌಲ್ಯ ಬಿತ್ತುತ್ತವೆ ಎಂದರು.

2025ರ ಮಕ್ಕಳ ಶ್ರೇಷ್ಠ ಕವಿ ಪ್ರಶಸ್ತಿ ಸ್ವೀಕರಿಸಿದ ಡಾ. ರುದ್ರಣ್ಣ ಚಿಲುಮಿ ಮಾತನಾಡಿ, ಪ್ರಶಸ್ತಿ ನನಗೆ ಬಯಸದೇ ಬಂದ ಭಾಗ್ಯ. ಜಾನಪದದ ಗರತಿಯ ಹಾಡುಗಳು ಮಕ್ಕಳ ಸಾಹಿತ್ಯವಾಗಿದೆ ಎಂದರು.

ಗಂಗಾಧರ ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ಕವಿ ಬಿ.ಕೆ. ಹೊಂಗಲ್​ ಅನುಭವ ಹಂಚಿಕೊಂಡರು. ದತ್ತಿದಾನಿ ಸೋಮನಾಥ ಹೊಂಗಲ, ಬಸವಪ್ರಭು ಹೊಸಕೇರಿ, ಡಾ. ಸುರೇಶ ಗುದಗನವರ, ಡಾ. ಬಾಳಣ್ಣ ಶೀಗಿಹಳ್ಳಿ, ರಾಮಚಂದ್ರ ಧೋಂಗಡೆ, ಎಂ.ಎಸ್​. ನರೇಗಲ್​, ಇತರರು ಇದ್ದರು.

ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net