ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ : ನ.10ರಂದು ಕಾಸರಗೋಡಲ್ಲಿ ಯೋಜನೆ

Published on

ಕಾಸರಗೋಡು: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಕೇರಳ ಘಟಕ, ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕನ್ನಡ ಗ್ರಾಮದ ಸಹಯೋಗದಲ್ಲಿ, ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ- 2024 ಕಾರ್ಯಕ್ರಮ ನವೆಂಬರ್ 10ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಜರುಗಲಿದೆ.

ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳದ ಎಲ್ಲ ಕನ್ನಡ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪ್ರತಿನಿಧಿಗಳನ್ನು ಆಮಂತ್ರಿಸಿ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನ ಅಧ್ಯಕ್ಷತೆ ಹಾಗೂ ವಿವಿಧ ಗೋಷ್ಠಿ ಅಧ್ಯಕ್ಷತೆ ಕನ್ನಡ ವಿದ್ಯಾರ್ಥಿಗಳೇ ವಹಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳ ಪಾಲಕರು ಅಥವಾ ಶಾಲಾ-ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ವಿದ್ಯಾರ್ಥಿಗಳ ಹೆಸರು, ಮನೆ ವಿಳಾಸ, ಶಾಲಾ-ಕಾಲೇಜಿನ ವಿಳಾಸ, ಜನ್ಮ ದಿನಾಂಕ, ವಯಸ್ಸು, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ, ಪಾಸ್‌ಪೋರ್ಟ್ ಅಳತೆ ಒಂದು ಭಾವಚಿತ್ರ ಮತ್ತು ಆಸಕ್ತಿ ಕ್ಷೇತ್ರದ ಕಿರು ಸಾಧನಾ ಪರಿಚಯ ಪತ್ರದೊಂದಿಗೆ ಮಾಹಿತಿಗಳನ್ನು ಬರಹ ಮೂಲಕ ಬರೆದು ಕಳುಹಿಸಲು ಕೋರಲಾಗಿದೆ.

ಶಾಲಾ ಮಕ್ಕಳ ಕವಿಗೋಷ್ಠಿ, ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ, ಬಹುಭಾಷಾ ವಿದ್ಯಾರ್ಥಿಗಳ ಕವಿಗೋಷ್ಠಿ, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಮೂಹ ಗೀತಾ ಗಾಯನ, ಕನ್ನಡ ಜಾನಪದ, ಚಲನಚಿತ್ರ ಸಮೂಹ ಗೀತ ಗಾಯನ, ಮಕ್ಕಳ ಸಾಹಿತ್ಯ ಗೋಷ್ಠಿ ವಿಭಾಗದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಬರೆದು ತಿಳಿಸಬೇಕು. ಸಮ್ಮೇಳನದಲ್ಲಿ ಕೇರಳ ಅಲ್ಲದೆ ಹೊರ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಮಾಹಿತಿಗಾಗಿ ಶಿವರಾಮ ಕಾಸರಗೋಡು, ಅಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕ, ಕನ್ನಡ ಗ್ರಾಮ, ಪಾರಕಟ್ಟ ರಸ್ತೆ, ಕಾಸರಗೋಡು-671121ಮೊಬೈಲ್ ಸಂಖ್ಯೆ(9448572016), ಪತ್ರ ವ್ಯವಹಾರಗಳನ್ನು ಅಂಚೆಯ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net