ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೂ ನೆರವು ಬೇಕು

bhr kasapa
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಬಿ.ಎ.ವರ್ಷಿಣಿ, ಸಹ ಅಧ್ಯಕ್ಷ ಎಸ್.ಮನೋಜ್ ಅವರನ್ನು ಅಭಿನಂದಿಸಲಾಯಿತು. ಸಿ.ಎನ್.ಅಶೋಕ್, ಎಚ್.ವಿ.ಸಿದ್ದೇಶ್, ಯಜ್ಞಪುರುಷ ಭಟ್, ಸತೀಶ್ ಅರಳೀಕೊಪ್ಪ, ಮಂಜುಳಾ, ಮಹಾದೇವ್, ವೀರೇಶ ಕುಲಕರ್ಣಿ ಇದ್ದರು.
Published on

ಬಾಳೆಹೊನ್ನೂರು: ಮಕ್ಕಳು ದೇಶದ ಆಧಾರ ಸ್ತಂಭಗಳಾಗಿದ್ದು, ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಸಬೇಕು. ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್.ಅಶೋಕ್ ಹೇಳಿದರು.

ಮಾ.20ರಂದು ರಂಭಾಪುರಿ ಪೀಠದಲ್ಲಿ ನಡೆಯಲಿರುವ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಸಭೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಹೂವುಗಳಿದ್ದಂತೆ. ಮಕ್ಕಳಿಗೆ ವಿಶ್ವಭಾವನೆ ತುಂಬಬೇಕು. ಇಂಥ ಕೆಲಸವನ್ನು ಪರಿಷತ್ ಮಾಡುತ್ತಿದೆ. ಮಗು ಜನಿಸುವಾಗ ವಿಶ್ವಮಾನವನಾಗಿರುತ್ತದೆ. ಬೆಳೆಯುತ್ತ ಅವರಿಗೆ ನಾವು ಜಾತಿ, ಧರ್ಮದ ವಿಷಬೀಜ ಬಿತ್ತುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೊಡ್ಡವರ ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಾಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ ಮಕ್ಕಳ ಸಮ್ಮೇಳನಕ್ಕೆ ಯಾವುದೇ ಪ್ರೋತ್ಸಾಹ ದೊರೆಯುತ್ತಿಲ್ಲ. ಮಕ್ಕಳ ಮನಸ್ಸು ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಒಂದು ದೇವಾಲಯ ನಿರ್ಮಾಣಕ್ಕಿಂತ ಉತ್ತಮ ಶಾಲೆ ನಿರ್ಮಾಣ ಮಾಡಿದರೆ ಅಲ್ಲಿಂದಲೇ ದೇಶದ ಅಭಿವೃದ್ಧಿ ಆರಂಭವಾಗಲಿದೆ ಎಂದರು. ಮಕ್ಕಳ ಅಂತಃಕರಣದಲ್ಲಿ ಸಾಹಿತ್ಯ ಬೆಳವಣಿಗೆಯಾಗಬೇಕಿದ್ದು, ಸಾಹಿತ್ಯ ಕೃತಿಗಳನ್ನು ಮಕ್ಕಳು ಹೆಚ್ಚು ಓದಬೇಕು. ವಿದ್ಯಾರ್ಥಿಗಳು ಸಮ್ಮೇಳನದ ಮೂಲಕ ಸಾಹಿತ್ಯದ ಪಾಂಡಿತ್ಯ ಪಡೆಯಲಿ ಎಂಬ ಉದ್ದೇಶದಿಂದ ಮಕ್ಕಳ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.ಮಸಾಪ ರಾಜ್ಯ ಕಾರ್ಯದರ್ಶಿ ಎಚ್.ವಿ.ಸಿದ್ದೇಶ್ ಮಾತನಾಡಿ, ಹತ್ತು ವರ್ಷಗಳ ಹಿಂದೆ ಮಕ್ಕಳ ಸಾಹಿತ್ಯದ ಬೆಳವಣಿಗೆಗಾಗಿ ಪರಿಷತ್ ರಚನೆಗೊಂಡಿದ್ದು, ಇಲ್ಲಿಯವರೆಗೆ ಅಂತಾರಾಜ್ಯ ಮಟ್ಟದ ಸಮ್ಮೇಳನಗಳನ್ನೂ ನಡೆಸಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷ ಕುಪ್ಪಳಿ, ಶೃಂಗೇರಿಯಲ್ಲಿ ನಾಟಕ, ನೃತ್ಯ, ಸಂಗೀತದ ತರಬೇತಿ ನೀಡಲಾಗಿದೆ. ಇದುವರೆಗೆ ಬಯಲುನಾಡು, ಉತ್ತರ ಕರ್ನಾಟಕದ ಭಾಗಗಳಲ್ಲಿ ಮಾತ್ರ ಸಮ್ಮೇಳನ ನಡೆಸಿದ್ದು, ಇದೇ ಮೊದಲ ಬಾರಿಗೆ ಮಲೆನಾಡು ಭಾಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.ಮಾ.20ರಂದು ರಂಭಾಪುರಿ ಪೀಠದಲ್ಲಿ ಎನ್.ಆರ್.ಪುರ ತಾಲೂಕಿನ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಸಲಾಗುವುದು. ಎಲ್ಲ ಶಾಲಾ ಕಾಲೇಜುಗಳು, ಸಾಹಿತ್ಯಾಭಿಮಾನಿಗಳು ಸಮ್ಮೇಳನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ, ಪತ್ರಿಕೆ ಹಾಗೂ ಸಾಹಿತ್ಯ ಕೃತಿಗಳು ವಿಶ್ವವಿದ್ಯಾಲಯಗಳಿದ್ದಂತೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವಿದ್ದರೆ ಜ್ಞಾನ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಮಸಾಪ ಆಯೋಜಿಸಿರುವ ಮಕ್ಕಳ ಸಮ್ಮೇಳನ ಪೂರಕವಾಗಿದೆ. ರಂಭಾಪುರಿ ಶ್ರೀಗಳು ಸಾಹಿತ್ಯ, ಸಂಸ್ಕೃತಿ ಪ್ರೋತ್ಸಾಹಿಸುತ್ತಿದ್ದು, ಅವರ ಆಶ್ರಯದಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಮಯೋಚಿತ ಎಂದರು.ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಸ್ಪರ್ಧೆ ವಿಜೇತರಾದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆ ಒಂಬತ್ತನೇ ತರಗತಿ ಬಿ.ಎ.ವರ್ಷಿಣಿ ಅವರನ್ನು ಸರ್ವಾಧ್ಯಕ್ಷರಾಗಿ ಸಭೆ ಆಯ್ಕೆ ಮಾಡಿತು. ರಂಭಾಪುರಿ ಪೀಠದ ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಎಸ್.ಮನೋಜ್ ಅವರನ್ನು ಸಹ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಕಸಾಪ ತಾಲೂಕು ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಜಿಲ್ಲಾ ಮಸಾಪ ಪ್ರಧಾನ ಕಾರ್ಯದರ್ಶಿ ಮಂಜುಳಾ ಮಹೇಶ್, ತಾಲೂಕು ಕಾರ್ಯದರ್ಶಿ ಮಹಾದೇವ್, ಶಿಕ್ಷಕ ವೀರೇಶ್ ಕುಲಕರ್ಣಿ, ಪ್ರಕೃತಿ ನಿಖಿಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net