ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿಲು ಪ್ರೋತ್ಸಾಹಿಸಿ

4spt1
Published on

ಸೋಮವಾರಪೇಟೆ: ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದು ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹೇಳಿದರು.

ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ 3 ದಿನಗಳ ಕಾಲ ಆಯೋಜಿಸಿರುವ ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಇದೊಂದು ಕಲಿಕೆಗೆ ಪೂರಕ ಕಾರ್ಯಕ್ರಮವಾಗಿದೆ. ಚಿಕ್ಕಂದಿನಿಂದಲೇ ಮಕ್ಕಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯೆ ಸೌಭಾಗ್ಯ ಬೇಲೂರು ಮಾತನಾಡಿ, ಸಾಹಿತ್ಯಾಭಿರುಚಿ ಬೆಳೆಸಿ ಗ್ರಂಥಾಲಯದ ಕಡೆಗೆ ಮಕ್ಕಳನ್ನು ಸೆಳೆಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಾಜ್ಯದ 6 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಆದರೆ ಓದುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದನ್ನು ಮನಗಂಡ ಇಲಾಖೆಯು ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ರಾಜ್ಯದ 75 ತಾಲೂಕುಗಳಲ್ಲಿ ಹಮ್ಮಿಕೊಂಡಿದೆ. ಒಟ್ಟು 8 ಸಾವಿರ ಮಕ್ಕಳು ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ವರ್ಷ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಬಾರಿ ವಿದ್ಯಾರ್ಥಿಗಳು ರಜೆ ದಿನಗಳಲ್ಲಿ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಿಇಒ ಭಾಗ್ಯಮ್ಮ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ, ಸಂಪನ್ಮೂಲ ವ್ಯಕ್ತಿಗಳಾದ ಸುಮನಾ ಮ್ಯಾಥ್ಯೂ, ಪವನ್ ಕುಮಾರ್, ಗೌತಮ್ ಕಿರಗಂದೂರು, ಶರ್ಮಿಳಾ ರಮೇಶ್, ಪಿ.ಬಿ.ಪೊನ್ನಪ್ಪ, ಹೇಮಂತ್ ಪಾರೇರ ಮತ್ತಿತರರು ಇದ್ದರು.

ನಾಲ್ಕು ತಂಡ ರಚನೆ, ತರಬೇತಿ: ಮಕ್ಕಳ ಸಾಹಿತ್ಯ ಸಂಭ್ರಮದ ಭಾಗವಾದ ಕವಿತೆ ಬರೆಯೋಣ, ಕಥೆ ಕಟ್ಟೋಣ, ನಾಟಕ ಮಾಡೋಣ, ನಾನು ರಿಪೋರ್ಟರ್ ನಾಲ್ಕು ತಂಡಗಳಲ್ಲಿ ತಲಾ 25 ಮಕ್ಕಳನ್ನು ಸೇರಿಸಿ ಕಥೆ, ಕವಿತೆ, ನಾಟಕ ವಿಭಾಗದಲ್ಲಿ ತರಬೇತಿ ನೀಡಲಾಯಿತು. ನಾನು ರಿಪೋರ್ಟರ್ ವಿಭಾಗದ ಕ್ಷೇತ್ರ ಭೇಟಿಯಲ್ಲಿ ಸೋಮವಾರಪೇಟೆ ಕಾಫಿ ಮಂಡಳಿಯ ಕಿರಿಯ ಸಹಾಯಕ ಅಧಿಕಾರಿ ರಂಜಿತ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಾಫಿ ಬೆಳೆಯ ಬಗ್ಗೆ ಮಾಹಿತಿ ನೀಡಿದರು. ಸೋಮವಾರಪೇಟೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಎಂ.ಬಿ.ಪ್ರದೀಪ್ ಬ್ಯಾಂಕಿನ ಬಗ್ಗೆ ಮಾಹಿತಿ ನೀಡಿದರು. ಸಂದರ್ಶನ ವಿಭಾಗದಲ್ಲಿ ಆಟೋ ಚಾಲಕಿ ಪ್ರಮೀಳಾ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಧೈರ್ಯದ ಬಗ್ಗೆ ತಿಳಿಸಿಕೊಟ್ಟರು. ಕಥೆ, ಕವನ, ನಾಟಕ ಎಲ್ಲದರಲ್ಲೂ ಮಕ್ಕಳು ತಮ್ಮನ್ನು ತೊಡಗಿಸಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net