

ಇಂಡಿ: ಮಕ್ಕಳಿಗೆ ಕಲಿಕೆಯ ವಿಧಾನ ಸುಗಮಗೊಳಿಸುವ ಮೂಲಕ ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಿದಾಗ ಮಾತ್ರ ಶಿಕ್ಷಕನ ಸಂವಹನಕ್ಕೆ ಅರ್ಥ ಬರುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಹೀರಾಪೂರ ಹೇಳಿದರು.
ತಾಲೂಕಿನ ಹಡಲಸಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್‌ಮಟ್ಟದ ಎ್ಎಲ್‌ಎನ್ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ಮಕ್ಕಳ ಕಲಿಕೆ ಎನ್ನುವುದು ಉಲ್ಲಾಸದಾಯಕ, ಉತ್ಸಾಹದಿಂದ ಪರಸ್ಪರ ಸಂವಹನವಾಗಬೇಕಿದೆ. ವಿದ್ಯಾರ್ಥಿಗಳ ಬುನಾದಿ ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ, ಸಾಮರ್ಥ್ಯ ಹೆಚ್ಚಿಸಲು ಶಿಕ್ಷಣ ಇಲಾಖೆ ಗಣಿತ ಗಣಕ, ಗಣಿತ ಕಲಿಕಾ ಆಂದೋಲನ, ಓದು ಕರ್ನಾಟಕದಂತಹ ಉಪಕ್ರಮಗಳ ಮೂಲಕ ನಾವಿನ್ಯಯುತ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇವುಗಳು ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳ ಜ್ಞಾನ ವಿಕಸಿತವಾಗಲು ಸಹಕಾರಿಯಾಗಿವೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಆರ್.ಎನ್. ಬಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಡಲಸಂಗ ಕ್ಲಸ್ಟರ್‌ನ ಹತ್ತು ಶಾಲೆಗಳ 117 ವಿದ್ಯಾರ್ಥಿಗಳು ಏಳು ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮ ಕಲಿಕಾ ಸಾಮರ್ಥ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶಾಲೆಗಳಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಶಿಕ್ಷಕ ಎ.ಎಸ್. ವಾಡಿ ಸ್ವಾಗತಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಮಾರ್ಗದರ್ಶಿ ಶಿಕ್ಷಕರು ಉಪಸ್ಥಿತರಿದ್ದರು.