ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಕ್ಕಳ ಕಲರವ

13
Published on

ಮೈಸೂರು: ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸೋಮವಾರ ಎಲ್ಲೆಲ್ಲೂ ಮಕ್ಕಳ ಕಲರವ ಮನೆಮಾಡಿತ್ತು. ಅವರು ಸಾಮಾನ್ಯ ಮಕ್ಕಳಲ್ಲ, ಅಂಗವಿಕಲ ಮಕ್ಕಳು. ಏನೊಂದೂ ಅರಿಯದ ಆ ಮುದ್ದು ಮನಸಿನ ಬಾಲ ಕುಸುಮಗಳು, ಅವರು ನಡೆಸಿಕೊಟ್ಟ ನೃತ್ಯ, ಹಾಡು ಮತ್ತು ಇತರೆ ಕಾರ್ಯಕ್ರಮ ಎಲ್ಲವೂ ಸಾಮಾನ್ಯರನ್ನೂ ಮೀರಿಸುವಂತಿತ್ತು.

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರ 21ನೇ ಚಾತುರ್ಮಾಸ್ಯ ವ್ರತದೀಕ್ಷೆ ಪ್ರಯುಕ್ತ ಸೋಮವಾರ ಅಂಗವಿಕಲ ಮಕ್ಕಳಿಂದ ಮೊದಲು ಅನಘಾಷ್ಟಮಿ ವ್ರತ ಮಾಡಿಸಲಾಯಿತು.

ಮೇಟಗಳ್ಳಿಯ ರಂಗರಾವ್ ಮೆಮೋರಿಯಲ್ ಶಾಲೆಯ ಅಂಗವಿಕಲ ಮಕ್ಕಳು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ರಚಿಸಿರುವ ಹಲವು ಭಜನೆಗಳನ್ನು ಹಾಡುವ ಮೂಲಕ ಎಲ್ಲರ ಮನಸೂರೆಗೊಳಿಸಿದರು. ಮಾತೃಮಂಡಳಿ ಶಾಲೆ ಮಕ್ಕಳು ಬೆಳ್ಳಿ ಮೂಡಿತೊ… ಕೋಳಿ ಕೂಗಿತು ಹಾಡಿಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು.

ಯೋಗೇಶ್ ಮಾಸ್ಟರ್ ನೃತ್ಯ ನಿರಂತರ ಟ್ರಸ್ಟ್ ಸ್ಥಾಪಿಸಿ ಅಂಗವಿಕಲ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದು, ಅವರ ಶಾಲೆಯ ಮಕ್ಕಳು ಮಾಡಿದ ಶಿವ ತಾಂಡವ ನೃತ್ಯ ರೂಪಕ ಅದ್ಭುತವಾಗಿತ್ತು.

ಆಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿರಂತನ್ ಎಂಬ ಬಾಲಕ ಭಗವದ್ಗೀತೆ ಶ್ಲೋಕ ಹಾಗೂ ಕ್ಯಾಸಿನೊ ನುಡಿಸಿ ಮನಸೆಳೆದನು. ಪುಟ್ಟ ವೀರಮ್ಮ ಶ್ರವಣ ದೋಷವುಳ್ಳ ಹೆಣ್ಣು ಮಕ್ಕಳ ಶಾಲೆ ಮಕ್ಕಳು ಕಟೀಲು ದುರ್ಗಾಪರಮೇಶ್ವರಿ ನೃತ್ಯ ರೂಪಕ ಮಾಡಿ ಎಲ್ಲರ ಮನ ಸೂರೆಗೊಂಡರು.
ಮೈಸೂರು ರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಉಚಿತ ವಸತಿ ಶಾಲೆ ಮಕ್ಕಳು ಶಿವ - ನಂದಿಯ ನೃತ್ಯ ಮಾಡಿ ಮನಗೆದ್ದರು. ಶ್ರೀ ಸಾಯಿ ಸಂಸ್ಥೆಯ ಮಕ್ಕಳು ವಾಲಿ- ಹನುಮನ ನೃತ್ಯ ಮಾಡಿ ಎಲ್ಲರ ಮನಸೂರೆಗೊಂಡರು. ಎಸ್‌ಜಿಎಸ್ ಶಾಲೆ ಮಕ್ಕಳು ಯಮುನಾ ತಟಕ ರಾಧಾ ಕೃಷ್ಣ ನೃತ್ಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡರು.

ಕೆ.ಚಿದಾನಂದ ಎಂಬ ಬಾಲಕ ಸನ್ನೆ ಭಾಷೆಯ ಮೂಲಕ ಅನಘಾ ವ್ರತ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದು ಎಲ್ಲರನ್ನೂ ಮಂತ್ರಮುಗ್ದವಾಗಿಸಿತು.
ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ವೀಕ್ಷಿಸಿದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಮಕ್ಕಳ ಪ್ರತಿಭೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಅಂಗವಿಕಲ ಮಕ್ಕಳೆಲ್ಲರೂ ಬಹಳ ಚೇತನ ಉಳ್ಳವರು. ಅವರಲ್ಲಿರುವ ಚೇತನ ಸಾಮಾನ್ಯ ಜನರಲ್ಲೂ ಇಲ್ಲ ಎನಿಸುತ್ತಿದೆ ಎಂದರು.

ಈ ಮಕ್ಕಳಿಂದ ಅನಘಾಷ್ಟಮಿ ವ್ರತ ಮಾಡಿಸಿದ್ದು ಸಂತೋಷ ಉಂಟುಮಾಡಿದೆ. ಈ ಮಕ್ಕಳ ಜೀವನ ಸುಗಮವಾಗಿರಲಿ. ಎಲ್ಲರಿಗೂ ಒಳ್ಳೆಯದಾಗಲಿ, ಭಗವಂತನ ಆಶೀರ್ವಾದ, ಗುರು ಕೃಪೆ ನಿಮ್ಮೆಲ್ಲರ ಮೇಲಿರಲಿ ಮಕ್ಕಳಿಗೆ ಹಾರೈಸಿದರು. ಇದೇ ವೇಳೆ ವಿವಿಧ ಶಾಲೆಗಳ 800 ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್‌ಮತ್ತಿತರ ವಸ್ತುಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net