ಮಕ್ಕಳ ಕಲ್ಪನೆ, ಆಲೋಚನಾ ಶಕ್ತಿ ಕಸಿಯುತ್ತಿರುವ ಮೊಬೈಲ್

National Children's Theater Festival
Published on

ಮೈಸೂರು: ದೇಶದಲ್ಲಿ ಮಕ್ಕಳ ರಂಗಭೂಮಿ ನಿರ್ಲಕ್ಷೃಕ್ಕೆ ಒಳಪಟ್ಟಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ಕಳವಳ ವ್ಯಕ್ತಪಡಿಸಿದರು.


ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ವತಿಯಿಂದ ರಂಗಾಯಣದ ಭೂಮಿಗೀತದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ರಂಗೋತ್ಸವದಲ್ಲಿ ಮಾತನಾಡಿದರು. ಪಾಶ್ಚಿಮಾತ್ಯ ದೇಶದಲ್ಲಿ ಮಕ್ಕಳ ರಂಗಭೂಮಿಗೆ ಹೆಚ್ಚಿನ ಆದ್ಯತೆ, ಮನ್ನಣೆ ದೊರೆತಿದೆ. ಆದರೆ ಭಾರತದಲ್ಲಿ ರಾಷ್ಟ್ರ ಮಟ್ಟದಿಂದ ಕೆಳಮಟ್ಟದವರೆಗೂ ಇದಕ್ಕೆ ಸಿಗಬೇಕಾದ ಸ್ಥಾನಮಾನ ದೊರೆತಿಲ್ಲ ಎಂದರು.


ಮಕ್ಕಳಿಗೆ ಸ್ವಂತ ಯೋಚನೆ, ಕಲ್ಪನೆ ಮಾಡದಂತಹ ದುಸ್ಥಿತಿ ನಿರ್ಮಿಸಲಾಗುತ್ತಿದೆ. ಇವರ ಮೇಲೆ ಮೊಬೈಲ್ ದೊಡ್ಡ ಪರಿಣಾಮ ಬೀರುತ್ತಿದೆ. ಈ ಕುರಿತು ಪಾಲಕರು ಯೋಚನೆ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.


ತಾಯಂದಿರು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸಗಳಲ್ಲಿ ಸಕ್ರಿಯವಾಗುತ್ತಿದ್ದಾರೆ. ಅವರು ಏನು ಮಾಡುತ್ತಾರೆ? ಏನು ನೋಡುತ್ತಿದ್ದಾರೆ ಎಂಬುದನ್ನೂ ಗಮನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಸಮಾಜ ತಾಂತ್ರಿಕವಾಗಿ ಮುನ್ನಡೆ ಗಳಿಸಿದೆ. ಆದರೆ ಜೀವನದ ಮೌಲ್ಯ, ಸಂಬಂಧಗಳು ಮರೆಯಾಗುತ್ತಿವೆ. ನಾವು ಅನುಭವಿಸಿದಂತೆ ಬಾಲ್ಯದ ಗತವೈಭವ ಈಗಿನ ಮಕ್ಕಳಿಗೆ ದೊರೆಯುತ್ತಿಲ್ಲ. ಇವರಿಗೆ ಅಜ್ಜ-ಅಜ್ಜಿಯೊಂದಿಗೆ ಬಾಂಧವ್ಯ, ಸಂಬಂಧವೇ ಇಲ್ಲವಾಗಿದೆ. ಮೊಬೈಲ್ ಎಲ್ಲವನ್ನೂ ಹಾಳು ಮಾಡುತ್ತಿದೆ. ಆದ್ದರಿಂದ ಮಕ್ಕಳಿಗಷ್ಟೇ ಅಲ್ಲ, ಪಾಲಕರಿಗೂ ತಿಳಿಹೇಳಿ ಜಾಗೃತಿ ಮೂಡಿಸಬೇಕಿದೆ ಎಂದರು.


ಶಾಲಾ ಮಕ್ಕಳಿಗೆ ಸುಲಭವಾಗಿ ಮಾದಕ ವಸ್ತುಗಳು ದೊರೆಯುತ್ತಿವೆೆ. ಚಾಕಲೇಟ್, ಬಿಸ್ಕತ್ತು ರೂಪದಲ್ಲಿ ಇದನ್ನು ಉಣಬಡಿಸಲಾಗುತ್ತಿದೆ. ಇದು ನಿಜಕ್ಕೂ ಆಘಾತಕಾರಿ. ಈ ಕುರಿತು ಎಚ್ಚರಿಕೆ ವಹಿಸಬೇಕಿದೆ ಎಂದರು.


ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವುದರಿಂದ ಮಹಿಳೆಯರ ಮೇಲಿನ ಜವಾಬ್ದಾರಿ ಹೆಚ್ಚಲಿದೆ. ಮಹಿಳೆಯರಿಗೆ ಗೌರವ, ಸ್ಥಾನಮಾನ ದೊರೆತಾಗ ಮಾತ್ರ ದೇಶ ಸಮೃದ್ಧವಾಗಲು ಸಾಧ್ಯ ಎಂದರು.


ರಂಗಕರ್ಮಿ ಪ್ರಸನ್ನ ಮಾತನಾಡಿ, ಶೈಕ್ಷಣಿಕ ರಂಗಭೂಮಿಯನ್ನು ಭಾರತ ಸರ್ಕಾರ ಕಡೆಗಣಿಸಿದೆ. ಮಕ್ಕಳು ಮೊಬೈಲ್ ಕಡೆಗೆ ನೋಡುವಂತೆ ಮಾಡಲಾಗುತ್ತಿದೆ ಎಂದರು.


ಮಕ್ಕಳು ಮೊಬೈಲ್‌ನಲ್ಲಿ ಮುಳುಗಿ ಹೋಗಿರುವುದು ದುರಂತವೇ ಸರಿ. ನಾವು ಸಹಜ ಪ್ರಾಣಿಗಳು ಎಂಬುದನ್ನೇ ಮರೆತಿದ್ದೇವೆ. ಕಣ್ಣು, ಕಿವಿ, ಕಾಲು ಬಳಕೆ ಮಾಡದೆ ಯಂತ್ರ ನಾಗರಿಕತೆಯ ದಾಸರಾಗಿದ್ದು, ಅದನ್ನೇ ಮಕ್ಕಳಿಗೂ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ರಾಜಕೀಯದಿಂದ ಬದಲಾವಣೆ ಸಾಧ್ಯವಿಲ್ಲ. ರಂಗಭೂಮಿಯಿಂದಲೇ ಅದು ಸಾಧ್ಯ. ಅದಕ್ಕಾಗಿ ರಾಜಕೀಯ ಕಾರ್ಯಕರ್ತರಲ್ಲ, ಸಭ್ಯ ಕಾರ್ಯಕರ್ತರಾಗೋಣ. ಅದರ ಮೂಲಕ ಸೂಕ್ಷ್ಮ ಶಿಕ್ಷಣವನ್ನು ಮಕ್ಕಳಿಗೆ ನೀಡೋಣ. ಮಕ್ಕಳಲ್ಲಿ ಕುತೂಹಲ, ಕಲ್ಪನೆ, ಸಹಜತೆ ಗುಣ ಬಿತ್ತಬೇಕಿದೆ. ಒಡೆದ ಹಾಲಿನ ರೀತಿಯಂತಾಗಿರುವ ಮಕ್ಕಳಲ್ಲಿ ಹೊಸ ಬದಲಾವಣೆ ತರಬೇಕಿದೆ. ಅದಕ್ಕಾಗಿ ಶೈಕ್ಷಣಿಕ ರಂಗಭೂಮಿ ಮೂಲಕ ಚಳವಳಿ ರೂಪಿಸಬೇಕಿದೆ ಎಂದರು.


ಸ್ವೀಡನ್‌ನ ಶೈಕ್ಷಣಿಕ ರಂಗಭೂಮಿ ತಜ್ಞರಾದ ಲೀನ ಫ್ರೆಡೆಲ್, ಲಿಸ್ ಹೆಲ್‌ಸ್ಟೋಮ್ ಸ್ವೆನಿಂಗ್‌ಸನ್, ರಂಗಯಾಣದ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು. ಬಳಿಕ ‘ಮುಟ್ಟಿಸಿಕೊಂಡವನು’ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net