

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಅಂಕ ಗಳಿಕೆ ಜತೆಗೆ ಜ್ಞಾನದ ಹಸಿವು, ಆತ್ಮ, ಸ್ಥೈರ್ಯ ಮುಖ್ಯ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರ ಬಂದು ಶಿಸ್ತಿನಿಂದ ಓದಿದರೆ ಸಾಧನೆ ಸಾಧ್ಯ ಎಂದು ಜಿಲ್ಲಾ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಭವಿಷ್ಯದ ಬುನಾದಿ. ಸಮಯ ಹಾಳು ಮಾಡದೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದ ಅವರು, ಉತ್ತಮ ಸ್ಥಿತಿ ತಲುಪಿದ ನಂತರ ಸಾಮಾಜಿಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದರು.
ಶಹರ ಸಿಪಿಐ ಎನ್.ಕೆ. ಕಾಡದೇವರ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ವಿಷಯ ಆಯ್ದುಕೊಂಡರೂ ಗುರಿ ಇಟ್ಟುಕೊಂಡು ಓದಬೇಕು. ಗುರಿ ಮುಟ್ಟಲು ತ್ಯಾಗ ಮಾಡಲು ಸಿದ್ಧರಿರಬೇಕಲ್ಲದೆ, ಕಂಡ ಕನಸು ನನಸಾಗಿಸಲು ಸತತ ಶ್ರಮ ಪಡಬೇಕು. ಸಮಾಜದಲ್ಲಿ ಬದುಕಬೇಕಾದ ನಾವು ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆನಲೈನ್ ಗೇಮಿಂಗ್ಗಳ ಬಗ್ಗೆ ಎಚ್ಚರ ಅಗತ್ಯ. ಪೋಕ್ಸೋ, ಬಾಲಾಪರಾಧ, ಬಾಲ್ಯವಿವಾಹ ತಡೆ ಕಾಯಿದೆಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಶಿವಶಂಕರ ಹಂಪಣ್ಣವರ ಅವರು ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳಿಗೆ, ಸಮಾಜಕ್ಕೆ ಹೆಮ್ಮೆ ತರುವಂತೆ ನಡೆದುಕೊಳ್ಳಬೇಕು. ಓದುವ ಹವ್ಯಾಸ ಬೆಳೆಸಿಕೊಂಡು ಭವಿಷ್ಯ ಉಜ್ವಲವಾಗಿಸಿಕೊಳ್ಳಬೇಕು ಎಂದರು.
ಆಡಳಿತ ಮಂಡಳಿ ಸದ್ಯಸರಾದ ಅಶೋಕ ಚಿಕ್ಕೋಡಿ, ಶಿವಾನಂದ ಹರಕುಣಿ, ಉಪಪ್ರಾಚಾರ್ಯ ಆರ್.ಬಿ. ಬಾನಪ್ಪನವರ, ವೈ.ಪಿ.ತಳವಾರ, ಶಿಕ್ಷಕರು, ಇತರರು ಇದ್ದರು.
ಪ್ರಾಚಾರ್ಯ ಸಿ.ವಿ. ಕಣಬರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ಮುಂಡರಗಿ ನಿರೂಪಿಸಿದರು. ಕೆ.ಎಂ. ಮಹಾಂತೇಶಯ್ಯ ವಂದಿಸಿದರು.