ಶೈಕ್ಷಣಿಕ ಬಲವರ್ಧನೆ ಸಲುವಾಗಿ ಮಕ್ಕಳ ಮನೆ ಶಾಲೆ ಆರಂಭ

21-06-HNPP 2
ಹೊಳೆನರಸೀಪುರ ತಾಲೂಕಿನ ಬಿದಿರಕ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ವ್ಯಾಸಂಗ ದೊರೆಯಲಿ ಎಂಬ ಉದ್ದೇಶದ ಮಕ್ಕಳ ಮನೆ ಶಾಲೆಯನ್ನು ಅರಕಲಗೂಡು ಶಾಸಕ ಎ.ಮಂಜು ಶುಕ್ರವಾರ ಉದ್ಘಾಟಿಸಿದರು.
Published on

ಹೊಳೆನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣಪುಟ್ಟ ಮಕ್ಕಳು ತಮ್ಮ ವಿದ್ಯಾಬ್ಯಾಸಕ್ಕೆ ಬೇರೆಡೆ ಹೋಗುವುದನ್ನು ತಪ್ಪಿಸಿ ತಮ್ಮ ಮನೆ ಮುಂದೆಯೇ ವ್ಯಾಸಂಗ ಮಾಡಲೆಂಬ ಉದ್ದೇಶದಿಂದ ಶೈಕ್ಷಣಿಕ ಬಲವರ್ಧನೆ ಮಾಡುವ ಸಲುವಾಗಿ ಮಕ್ಕಳ ಮನೆ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದು ಅರಕಲಗೂಡು ಶಾಸಕ ಎ.ಮಂಜು ಹೇಳಿದರು.

ತಾಲೂಕಿನ ಬಿದರಕ್ಕ ಕ್ಲಷ್ಟರ್‌ನ ಬಿದಿರಕ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ ಮಕ್ಕಳ ಮನೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಹನ್ನೆರಡು ಮಕ್ಕಳ ಮನೆ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಈ ಶಾಲೆಗೆ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ. ಈ ಶಾಲೆಗಳನ್ನು ನನ್ನ ಕುಟುಂಬ, ನನಗೆ ಬರುವ ಸಂಬಳ ಹಾಗೂ ಈ ಭಾಗದಲ್ಲಿನ ಹಳೇ ವಿದ್ಯಾರ್ಥಿಗಳೆಲ್ಲರೂ ಸೇರಿ ಖರ್ಚನ್ನು ನಿಭಾಯಿಸುತ್ತಿರುವುದಾಗಿ ತಿಳಿಸಿದರು.

ಹಳ್ಳಿಮೈಸೂರು ಹೋಬಳಿಯಲ್ಲಿ ಎರಡು ಮಕ್ಕಳ ಮನೆ ಶಾಲೆ ಆರಂಭಿಸಲಾಗುತ್ತಿದೆ. ಈ ಶಾಲೆ ನಿತ್ಯ ಬೆಳಗ್ಗೆ 9.45 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಸಲಾಗುತ್ತದೆ. ಮಧ್ಯಾಹ್ನ 1 ಗಂಟೆ ನಂತರ ಒಂದನೇ ತರಗತಿಯಿಂದ ನಾಲ್ಕನೇ ತರಗತಿಗೆ ಅದೇ ಶಿಕ್ಷಕರು ಪಾಠ ಪ್ರವಚನ ನೀಡಲಿದ್ದಾರೆ ಎಂದರು.
ನೂತನವಾಗಿ ಆರಂಭವಾಗಿರುವ ಹನ್ನೇರಡು ಮಕ್ಕಳ ಮನೆ ಶಾಲೆಗಳನ್ನು ನಡೆಸಲು ಬರುವ ಖರ್ಚು-ವೆಚ್ಚವನ್ನು ನಾನು ಮತ್ತು ಈ ಭಾಗದ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಭರಿಸಲಾಗುವುದೆಂದು ತಿಳಿಸಿದರು.

ಶಾಸಕ ಮಂಜು ಅವರೊಂದಿಗೆ ಬಿಇಒ ಸೋಮಲಿಂಗೇಗೌಡ, ತಾಪಂ ಅಧಿಕಾರಿ ಕುಸುಮಾಧರ್, ಜಿಲ್ಲಾ ಪಂಚಾಯಿತಿ ನೀರು ಸರಬರಾಜು ಇಂಜಿನಿಯರ್ ಪ್ರಶಾಂತ್ ಸೇರಿದಂತೆ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net