ಮೇಲುಕೋಟೆಯಲ್ಲಿ ಮಕ್ಕಳ ಮನೆ ಆಕರ್ಷಕ

3mlk1
ಮೇಲುಕೋಟೆ ಶತಮಾನದ ಬಾಲಕರ ಸರ್ಕಾರಿ ಶಾಲೆಯಲ್ಲಿ ಮಕ್ಕಳಮನೆ ಸಿದ್ಧವಾಗಿರುವುದು.
Published on

ಮೇಲುಕೋಟೆ: ಇಲ್ಲಿನ ಶತಮಾನದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿರುವ ಮಕ್ಕಳ ಮನೆ (ಎಲ್.ಕೆ.ಜಿ.ಮತ್ತು ಯು.ಕೆ.ಜಿ.) ಪಾಲಕರ ಗಮನ ಸೆಳೆಯುತ್ತಿದೆ.

ಮುಖ್ಯಶಿಕ್ಷಕರ ಆಸಕ್ತಿಯ ಪರಿಣಾಮ ಒಂದೇ ತಿಂಗಳಲ್ಲಿ ಸಂಪೂರ್ಣ ಸೌಲಭ್ಯ ಪಡೆದುಕೊಂಡು ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ. ಶಾಲೆ 150ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ವೇಳೆಯಲ್ಲೇ ಮಕ್ಕಳನ್ನು ಆಕರ್ಷಿಸಲು ಮಕ್ಕಳಮನೆ ಆರಂಭಗೊಂಡಿರುವುದು ಶಾಲೆಯ ಬಲವರ್ಧನೆಗೆ ಪೂರಕವಾಗಿದೆ.

ಸರ್ಕಾರಿ ಶಾಲೆಗಳಲ್ಲಿ ದಿನೇದಿನೆ ದಾಖಲಾತಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶ್ರಮಿಸುತ್ತಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದ ಶಾಲೆಯಲ್ಲಿ ಎಲ್.ಕೆ.ಜಿ, ಯುಕೆಜಿ ಆರಂಭಿಸಲು ಸಲಹೆ ನೀಡಿದ್ದರು. ಅದರಂತೆ ಸಮಗ್ರ ಶಿಕ್ಷಣದ ಮಂಡ್ಯ ಜಿಲ್ಲಾ ಯೋಜನಾಧಿಕಾರಿ ಚಂದ್ರಶೇಖರ್ ಸಹ ಮಕ್ಕಳಮನೆ ಆರಂಭಿಸಲು ಸೂಚಿಸಿದ್ದರು. ಶಿಕ್ಷಣಾಧಿಕಾರಿ ಮತ್ತು ಶಾಸಕರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ ಮೇಲುಕೋಟೆ ಶತಮಾನದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಸಂತಾನ ರಾಮನ್ ಬಹುತೇಕ ಎಲ್ಲ ಸೌಲಭ್ಯಗಳನ್ನು ದಾನಿಗಳಿಂದ ಕಲ್ಪಿಸುವ ಮೂಲಕ ಮಕ್ಕಳಮನೆ ಸಜ್ಜುಗೊಳಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಸಲಹೆಯಂತೆ ಶಾಲಾ ಆವರಣದಲ್ಲಿರುವ ಸಿಆರ್‌ಸಿ ಕೇಂದ್ರವನ್ನೇ ಬಳಕೆ ಮಾಡಿ ಆಕರ್ಷಣೆ ಹೆಚ್ಚಿಸಲಾಗಿದೆ ಸುಮಾರು 28 ಮಕ್ಕಳು ದಾಖಲಾಗಿ ತರಗತಿಗೆ ಬರುತ್ತಿದ್ದಾರೆ.

ಮಕ್ಕಳಿಗೆ ಹಲವು ಸೌಲಭ್ಯ

ಮಕ್ಕಳ ಮನೆ ಗೋಡೆಗಳು ಆಕರ್ಷಕ ವರ್ಣಚಿತ್ರಗಳೊಂದಿಗೆ ಕಂಗೊಳಿಸುತ್ತಿದ್ದರೆ ಮಕ್ಕಳು ಚಟುವಟಿಕೆ ನಡೆಸಲು ರೌಂಡ್ ಟೇಬಲ್, ಬರೆಯಲು ಪುಟ್ಟ ಡೆಸ್ಕ್‌ಗಳು, ಪ್ರೊಜೆಕ್ಟರ್, 55 ಇಂಚು ಟಿವಿ, ಚನ್ನಪಟ್ಟಣದಿಂದಲೇ ತರಿಸಿದ ಕಲಿಕೋಪಕರಣಗಳು, ಮಕ್ಕಳ ಮನೆಗೆ ಪ್ರತ್ಯೇಕ ಬೀರು, ಕಬೋರ್ಡ್, ಬ್ಲೂಟೂತ್ ಸ್ವೀಕರ್ ಸೌಲಭ್ಯ ದೊರಕಿಸಿಕೊಡಲಾಗಿದೆ. ಜತೆಗೆ ಪ್ರತ್ಯೇಕ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮತ್ತಷ್ಟು ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಕಲಿಕೆಗಾಗಿ ಉಚಿತ ವರ್ಕ್‌ಬುಕ್, ಶಾಲಾ ಬ್ಯಾಗ್, ಲೇಖನ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಟ್ರಾೃಕ್‌ಸೂಟ್, ಶೂ, ಬೆಲ್ಟ್, ಐಡಿ ಕಾರ್ಡ್ ಉಚಿತವಾಗಿ ಸ್ವಾಂತಂತ್ರೊೃೀತ್ಸವದ ವೇಳೆಗೆ ವಿತರಿಸಲು ಸಿದ್ಧತೆ ಮಾಡಲಾಗಿದೆ. ಪಾಲಕರೂ ಉತ್ಸಾಹದಿಂದ ಸೌಲಭ್ಯ ಕಲ್ಪಿಸಲು ಸಹಕಾರ ನೀಡುತ್ತಿರುವುದು ಮತ್ತಷ್ಟು ಉತ್ಸಾಹ ಹೆಚ್ಚಿದೆ.

ಮಕ್ಕಳಮನೆ ಸೌಲಭ್ಯಕ್ಕೆ ಸುಮಾರು 2 ಲಕ್ಷ ರೂ. ವೆಚ್ಚವಾಗಿದ್ದು, ಪ್ರಮುಖವಾಗಿ ವಕೀಲ ಅರವಿಂದ ರಾಘವನ್, ಅರ್ಕಿಟೆಕ್ಟ್ ವಿಶ್ವನಾಥ್, ಮೈಸೂರು ರೋಟರಿ ಕ್ಲಬ್ ಸಹಕಾರ ನೀಡಿದೆ. ಮುಖ್ಯ ಶಿಕ್ಷಕ ಸಂತಾನ ರಾಮನ್ ವರ್ಣಚಿತ್ರ ಬರವಣಿಗೆ ಹಾಗೂ ಶಿಕ್ಷಕಿಗೆ ವೇತನ ಭರಿಸುವ ಜತೆಗೆ ಸಣ್ಣಪುಟ್ಟ ವ್ಯವಸ್ಥೆಗೆ ಸ್ವತಃ ಸಹಕಾರ ನೀಡಿದ್ದಾರೆ. ಪಾಲಕರು ವೈಯಕ್ತಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಒಪ್ಪಿದ್ದಾರೆ. ಇಷ್ಟೆಲ್ಲಾ ಸಹಕಾರ, ಪರಿಶ್ರಮದ ಫಲವಾಗಿ ಮಕ್ಕಳಮನೆ ಆರಂಭದಲ್ಲೇ ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ. ಈಗಾಗಲೇ ಅಕ್ಷರಾಭ್ಯಾಸ, ಸರಸ್ವತಿಪೂಜೆ ಮಾಡಲಾಗಿದೆ.

ಏನೇನು ಕಲಿಕೆ ಇಂಗ್ಲಿಷ್ ಮತ್ತು ಕನ್ನಡ ಭಾಷೆ ಕಲಿಕೆ, ರೈಮ್ಸ್, ಶಿಶು ಗೀತೆಗಳ ಕಲಿಕೆ, ಸರಳ ಗಣಿತ, ಪ್ರಾರ್ಥನಾ ಶ್ಲೋಕಗಳು, ಸಂಗೀತ, ಚಿತ್ರಕಲೆ, ನೃತ್ಯ ಕಲಿಕೆ ನಿರಂತರವಾಗಿ ಇರುವಂತೆ ಶಿಕ್ಷಕರನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿವಾರ ಮೂರು ವಿಷಯಗಳಿಗೆ ಉಚಿತ ವರ್ಕ್‌ಶೀಲ್ ನೀಡಲು ಯೋಜಿಸಲಾಗಿದೆ. ಮೇಲುಕೋಟೆಯ ಮಕ್ಕಳಮನೆಯನ್ನು ಅರ್ಥಪೂರ್ಣವಾಗಿ ಮುನ್ನಡೆಸಲು ಮಕ್ಕಳಮನೆ ಅಧ್ಯಕ್ಷ ಚಂದು ಭಾರದ್ವಾಜ್ ಮಾರ್ಗದರ್ಶನದಲ್ಲಿ ಪಾಲಕರು ನಿರ್ಧರಿಸಿದ್ದಾರೆ.

ಮೇಲುಕೋಟೆ ಮಕ್ಕಳ ಮನೆ ವ್ಯವಸ್ಥೆ ಖುಷಿ ಕೊಟ್ಟಿದೆ. ತಾಲೂಕಿನಲ್ಲೇ ಮಾದರಿ ಮಕ್ಕಳಮನೆಯಾಗಿ ರೂಪುಗೊಳ್ಳುತ್ತಿದೆ. ಮತ್ತಷ್ಟು ಸೌಲಭ್ಯ ದೊರೆತು ಶತಮಾನದ ಶಾಲೆ ಬಲವರ್ಧನೆಯಾಗಬೇಕು. ಮುಖ್ಯಶಿಕ್ಷಕರ ಶ್ರಮ ಶ್ಲಾಘನೀಯ. ಬೆಟ್ಟಸ್ವಾಮಿಗೌಡ ಸಿಆರ್‌ಪಿ, ಮೇಲುಕೋಟೆ ಮೇಲುಕೋಟೆಯಲ್ಲಿ ಆರಂಭವಾಗಿರುವ ಮಕ್ಕಳಮನೆಗೆ ಸಂಪೂರ್ಣ ಸಹಕಾರವಿದೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬೇಕಾದ ಎಲ್ಲ ಸಹಕಾರ ನೀಡಲಾಗುತ್ತದೆ. ಮುಖ್ಯಶಿಕ್ಷಕರು, ಪಾಲಕರು ಮತ್ತು ದಾನಿಗಳ ಸಹಕಾರದಲ್ಲಿ ರೂಪುಗೊಂಡ ಮಕ್ಕಳಮನೆ ಯಶಸ್ವಿಯಾಗಿ ನಡೆಯಲಿ ಚಂದ್ರಶೇಖರ್ ಯೋಜನಾಧಿಕಾರಿ, ಸಮಗ್ರ ಶಿಕ್ಷಣ ಯೋಜನೆ, ಮಂಡ್ಯ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net