ಆನ್‌ಲೈನ್‌ನಲ್ಲೇ ಮಕ್ಕಳ ಗ್ರಾಮಸಭೆ, ಜಿಪಂ ಸಿಇಒ ನಾಗರಾಜ್ ಚಿಂತನೆ, ಪಂಚಾಯಿತಿ ಸಿಬ್ಬಂದಿ ಜತೆಗೆ ವಿಶೇಷ ಸಭೆ

nm nagaraja new
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರವೆನಿಸಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಕುಂದುಕೊರತೆ ನಿವಾರಣೆ ಹಾಗೂ ಸುರಕ್ಷತೆಗೆ ಆದ್ಯತೆ ಸಿಗಬೇಕೆಂಬ ಸದುದ್ದೇಶದಿಂದ ಅನುಷ್ಠಾನಗೊಂಡಿರುವ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಗೆ ಆನ್‌ಲೈನ್ ಟಚ್ ನೀಡಲು ಗ್ರಾಮಾಂತರ ಜಿಪಂ ಚಿಂತನೆ ನಡೆಸಿದೆ.

ಹೌದು. ಮಕ್ಕಳ ಹಕ್ಕು ಬಾಧ್ಯತೆಗಳ ರಕ್ಷಣೆ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್‌ನಲ್ಲಿ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ನಡೆಸಲು ಉದ್ದೇಶಿಸಿದ್ದು, ಕರೊನಾ ಕಾರಣದಿಂದ ಆನ್‌ಲೈನ್ ಮೂಲಕ ಸಭೆ ನಡೆಸಲು ಜಿಲ್ಲಾ ಪಂಚಾಯಿತಿ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿನ ಎಲ್ಲ 105 ಪಂಚಾಯಿತಿಯ ಕಾರ್ಯದರ್ಶಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಯೋಜನೆ ಸಾಕಾರಕ್ಕೆ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.

ಗ್ರಾಮ ಸ್ವರಾಜ್ ಕಾಯ್ದೆಯಡಿ ಮಕ್ಕಳ ಹಕ್ಕು ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಮಕ್ಕಳಿಗೆ ಶಿಕ್ಷಣವಷ್ಟೇ ಅಲ್ಲದೆ ಅವರ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಪ್ರತಿ ಪಂಚಾಯಿತಿಗಳು ಒತ್ತು ನೀಡಬೇಕಿದೆ. ಶಾಲೆ ಹಾಗೂ ಮನೆಗಳಲ್ಲಿ ಮಕ್ಕಳಿಗೆ ಮೂಲಸೌಕರ್ಯ ಸಮಸ್ಯೆಗಳೇನಿವೆ, ಶಾಲೆಗೆ ಹೋಗಿ ಬರುವಾಗ ಎದುರಿಸಬಹುದಾದ ಸಮಸ್ಯೆಗಳು ಸೇರಿ ಕುಂದುಕೊರತೆಗಳನ್ನು ಮಕ್ಕಳಿಂದ ನೇರವಾಗಿ ಆಲಿಸಿ ಅವುಗಳಿಗೆ ಪರಿಹಾರ ಕಲ್ಪಿಸುವುದು ಈ ಸಭೆಯ ಮುಖ್ಯ ಉದ್ದೇಶ ಎಂದು ಸಿಇಒ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ.

ಸಿಬ್ಬಂದಿಗೆ ತರಬೇತಿ: ಮಕ್ಕಳ ಗ್ರಾಮ ಸಭೆ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಪಂಚಾಯಿತಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇತ್ತೀಚೆಗೆ ದೊಡ್ಡಗಟ್ಟಿಗನಬ್ಬೆ ಗ್ರಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಯೂಟ್ಯೂಬ್ ಚಾನಲ್ ನೇರಪ್ರಸಾರದಲ್ಲಿ ಸಿಇಒ ವೀಕ್ಷಣೆ ನಡೆಸಿದ್ದಾರೆ. ಪಂಚಾಯಿತಿ ಸಿಬ್ಬಂದಿಯೊಂದಿಗೆ ಚರ್ಚಿಸಿ ಸಾಧಕಬಾಧಕಗಳ ಅವಲೋಕನದ ಬಳಿಕ ಯೋಜನೆ ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್ ದೊರೆಯಲಿದೆ ಎನ್ನಲಾಗಿದೆ.

ಮತ್ತಷ್ಟು ಸಭೆಗಳು: ಮಕ್ಕಳ ಗ್ರಾಮಸಭೆ ಜತೆಗೆ ಮಹಿಳಾ ಹಾಗೂ ದುರ್ಬಲ ವರ್ಗದವರಿಗಾಗಿಯೇ ವಿಶೇಷ ಗ್ರಾಮಸಭೆ ನಡೆಸಲು ಸಿದ್ಧತೆ ನಡೆದಿದೆ. ಕರೊನಾ ಕಾರಣದಿಂದ ಈ ಎಲ್ಲ ಸಭೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ವಿದ್ಯಾರ್ಥಿನಿಯರಿಗೆ ಒತ್ತು: ಈ ಹಿಂದಿನ ಅನೇಕ ಮಕ್ಕಳ ಗ್ರಾಮಸಭೆಗಳಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳು ಅನಾವರಣಗೊಂಡಿವೆ. ಶಾಲೆಗಳಲ್ಲಿ ಶೌಚಗೃಹದ ಮುಜುಗರ, ರಸ್ತೆಯಲ್ಲಿ ಹೋಗಿಬರುವಾಗ ಕಿಡಿಗೇಡಿಗಳ ಕಾಟ ಮತ್ತಿತರ ಗಂಭೀರ ವಿಷಯಗಳು ಗಮನಕ್ಕೆ ಬಂದಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಹಕಾರ ಪಡೆದು ವಿದ್ಯಾರ್ಥಿನಿಯರಲ್ಲಿ ಭದ್ರತಾಭಾವನೆ ಮೂಡಿಸಲು ಸಭೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಇಂಥ ಗ್ರಾಮ ಸಭೆಗಳಲ್ಲಿ ಕೈಗೊಳ್ಳುವ ತೀರ್ಮಾನಗಳೇ ಅಂತಿಮವಾಗಿದ್ದು, ಮಹಿಳಾ ಹಕ್ಕುಗಳ ವಿಶೇಷ ಗ್ರಾಮ ಸಭೆಗಳ ಮಾದರಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುವ ಪದ್ಧತಿಯನ್ನು ಗ್ರಾಪಂಗಳಲ್ಲಿ ಅನುಸರಿಸಲಾಗುತ್ತಿದೆ. ಮಕ್ಕಳಿಗಾಗಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಗ್ರಾಮಸ್ಥರು ಹಾಗೂ ಪಾಲಕರಿಗೆ ತಿಳಿವಳಿಕೆ ನೀಡುವುದು, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳು, ಪಾಲಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು, ಆರೋಗ್ಯ, ಶಿಕ್ಷಣ, ಕಾರ್ಮಿಕ, ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಇಲಾಖೆ ಸೇರಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಯೋಜನೆ ಇದಾಗಿದೆ.

ಮಕ್ಕಳ ಹಕ್ಕುಬಾಧ್ಯತೆ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ. ಕುಂದುಕೊರತೆ, ಸಮಸ್ಯೆ ಬಗ್ಗೆ ಮಕ್ಕಳಿಂದಲೇ ನೇರವಾಗಿ ಆಲಿಸಿ, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಸಭೆಗಳು ಪ್ರಮುಖ ಪಾತ್ರವಹಿಸಲಿವೆ. ಕರೊನಾ ಕಾರಣದಿಂದ ಆನ್‌ಲೈನ್‌ನಲ್ಲೇ ಸಭೆ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಶೀಘ್ರ ಅನುಷ್ಠಾನಕ್ಕೆ ಮುಂದಾಗಲಾಗುವುದು. ಎನ್.ಎಂ.ನಾಗರಾಜ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net