ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವತಿಯಿಂದ ಮಕ್ಕಳ ಸಂತೆ

16-npk-1
Published on

ನಾಪೋಕ್ಲು: ಇಲ್ಲಿನ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವತಿಯಿಂದ ಗುರುವಾರ ಶಾಲಾ ಸಭಾಂಗಣದಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು. ಮಕ್ಕಳ ಸಂತೆಯನ್ನು ಎಕ್ಸೆಲ್ ಶಾಲೆಯ ಮುಖ್ಯಸ್ಥ ಕುಟ್ಟಂಚೆಟ್ಟಿರ ಮಾದಪ್ಪ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಪ್ರಿಯಾಂಕಾ ಮಾತನಾಡಿ, ಮಕ್ಕಳ ಕಲಿಕೆಗೆ ಪೂರಕವಾಗಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ವ್ಯವಹಾರ ಜ್ಞಾನ, ಸೃಜನಶೀಲತೆ, ಗಣಿತ ಲೆಕ್ಕಾಚಾರಗಳನ್ನು ಕಲಿತುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೇತಾಜಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ ಮಾತನಾಡಿ, ಸಂತೆ ಎಂದರೆ ಗದ್ದಲ, ಕಲರವ. ಇಲ್ಲಿ ಎಲ್ಲ ರೀತಿಯ ವಸ್ತುಗಳು ಸಿಗುತ್ತದೆ. ಅಂತಹ ಒಂದು ವಾತಾವರಣವನ್ನು ಶಿಕ್ಷಕರಿಂದ ಈ ಶಾಲೆಯಲ್ಲಿ ಆಯೋಜಿಸಿದ್ದು ಮಕ್ಕಳ ಕಲಿಕೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು. ಇದರಿಂದ ವ್ಯವಹಾರ ಜ್ಞಾನ ,ಬದುಕುವ ಕಲೆ ವೃದ್ಧಿಸಲಿದೆ ಎಂದರು.

ಮಕ್ಕಳ ಸಂತೆಯಲ್ಲಿ 6 ರಿಂದ 10ನೇ ತರಗತಿವರೆಗಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ತರಹೇವಾರಿ ತಿಂಡಿ ತಿನಿಸುಗಳು, ತರಕಾರಿಗಳು, ಹಣ್ಣು ಹಂಪಲುಗಳನ್ನು ಪ್ರದರ್ಶಿಸಿದರು ಮತ್ತು ಮಾರಾಟ ಮಾಡಿದರು.

ಶಾಲೆ ನಿರ್ದೇಶಕ ಶರತ್, ಭವ್ಯಾ, ವಿದ್ಯಾ ಸುರೇಶ್ ,ಮುಖ್ಯ ಶಿಕ್ಷಕ ತಮ್ಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net