

ಶನಿವಾರ ಹಿರೇಕಲ್ಮಠದಲ್ಲಿ ತಾಲೂಕು ಬಂಜಾರ (ಲಂಬಾಣಿ) ಸೇವಾ ಸಂಘದಿಂದ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಈ ವಸತಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೂ ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸಲು ಅನುಕೂಲವಾಗಲಿದೆ. ಈ ಮಹತ್ವದ ಯೋಜನೆಗೆ ಶಾಸಕ ಡಿ.ಜಿ. ಶಾಂತನಗೌಡ ಅವರ ಪ್ರಯತ್ನ ಶ್ಲಾಘನೀಯ" ಎಂದು ಲಮಾಣಿ ಹೇಳಿದರು.
ಇತರ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉಲ್ಲೇಖಿಸಿದ ಅವರು, ಮಹಾಮಠದ ಸ್ಥಳದಲ್ಲಿರುವ ಸಪ್ತಮಾಲಿಕೆಯರ ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡಲಾಗುವುದು ಎಂದರು. ಜೊತೆಗೆ, ಶಿವಮೊಗ್ಗದಿಂದ ಸೂರಗೊಂಡನಕೊಪ್ಪ ಮೂಲಕ ರಾಣೆಬೆನ್ನೂರಿಗೆ ರೈಲು ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನವನ್ನು ಶ್ಲಾಘಿಸಿದರು.
ಸಮುದಾಯದ ಬಹುದಿನಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಲಮಾಣಿ ಅವರು, ತಾಂಡಾ, ಹಾಡಿ, ಹಟ್ಟಿಗಳಲ್ಲಿ ಶೀಘ್ರದಲ್ಲಿಯೇ ಇ-ಸ್ವತ್ತು ಮಾಡುವ ಆದೇಶವನ್ನು ಸರ್ಕಾರ ಹೊರಡಿಸಲಿದೆ ಎಂದು ತಿಳಿಸಿದರು. ಅಲ್ಲದೆ, ಅರಣ್ಯ ಭೂಮಿಯಲ್ಲಿ ವಾಸ ಮಾಡುತ್ತಿರುವವರಿಗೆ ಪಟ್ಟಾ ಕೊಡುವ ಆದೇಶವೂ ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.
ಸಂಘದ ಮನವಿ ಮೇರೆಗೆ ಬಂಜಾರ ಭವನ ನಿರ್ಮಾಣಕ್ಕೆ ನಿವೇಶನ ಕೊಡಲು ಶಾಸಕ ಶಾಂತನಗೌಡ ಮತ್ತು ಬಯಲು ಸೀಮೆ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅನುದಾನದ ಸಹಾಯ ಹಸ್ತ ಚಾಚಬೇಕು ಎಂದು ಕೋರಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಬಂಜಾರ ಸಮಾಜ ಸ್ವಾಭಿಮಾನಿ ಮತ್ತು ಮೈಮುರಿದು ದುಡಿದು ತಿನ್ನುವ ಪ್ರತಿಭಾವಂತರ ಸಮುದಾಯ. ಅವಳಿ ತಾಲೂಕಿನಲ್ಲಿರುವ ಎಲ್ಲಾ ತಾಂಡಾಗಳನ್ನು ಮುಂದಿನ ನವೆಂಬರ್ ತಿಂಗಳಲ್ಲಿ ಕಂದಾಯ ಗ್ರಾಮಗಳನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ ಅವರು ಸಮಾರಂಭದಲ್ಲಿ ಯುವಕರಿಗೆ ಕಿವಿಮಾತು ಹೇಳಿದರು. ಬಂಜಾರ ಸಮುದಾಯದವರನ್ನು ಒಳಗೊಂಡು ಪರಿಶಿಷ್ಟ ಜಾತಿ, ಪಂಗಡದವರು ಆಳವಾಗಿ ಅಧ್ಯಯನ ಮಾಡಿದರೆ, ಐಎಎಸ್, ಐಪಿಎಸ್ ತೇರ್ಗಡೆ ಆಗುವುದು ಕಷ್ಟವಾಗದು ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಕ್ಷೇತ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಲೋಕೇಶ್ ನಾಯ್ಕ, ಮೌಂಟ್ ಎವರೆಸ್ಟ್ ಶಿಖರ ಏರಿದ ವಿಕ್ರಂ ನಾಯ್ಕ ಸೇರಿದಂತೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು ಮತ್ತು ಸಮುದಾಯದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಂಜನಾಯ್ಕ, ಡಾ.ಈಶ್ವರ್ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ತಾಲೂಕು ಬಂಜಾರ ಸೇವಾ ಸಂಘದ ಅಧ್ಯಕ್ಷ ರವಿನಾಯ್ಕ ಅಧ್ಯಕ್ಷತೆ ವಹಿಸಿದ್ದರು.