

ನರೇಗಲ್ಲ ಕುಸಿಯುತ್ತಿರುವ ಛಾವಣಿ. ಬಿರುಕು ಬಿಟ್ಟಿರುವ ಗೋಡೆಗಳು. ಬಿದ್ದಿರುವ ಹೆಂಚುಗಳು. ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳು. ಇದರ ಮಧ್ಯೆ ಜೀವಭಯದಲ್ಲಿ ಪಾಠ ಕೇಳುತ್ತಿರುವ ಮಕ್ಕಳು, ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರು ಹಾಗೂ ಅಡುಗೆಯವರು.
ಪಟ್ಟಣ ಸಮೀಪದ ತೋಟಗಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು. ಶಾಲೆಯ ನಾಲ್ಕು ಕೊಠಡಿಗಳು ಬಿರುಕು ಬಿಟ್ಟಿದ್ದು ಅದರಲ್ಲಿ ಎರಡು ಕೊಠಡಿಗಳ ಮೇಲ್ಛಾವಣಿ ಸಂಪೂರ್ಣ ಹಾಳಾಗಿದೆ. ಯಾವ ಸಮಯದಲ್ಲಾದರೂ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಛಾವಣೆ ಯಾವಾಗ ಕುಸಿಯುತ್ತದೆಯೋ ಎನ್ನುವ ಭಯದಲ್ಲಿಯೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
1935ರಲ್ಲಿ 8 ಕೊಠಡಿಗಳೊಂದಿಗೆ ನಿರ್ವಣಗೊಂಡ ಈ ಶಾಲೆಗೆ ಸಣ್ಣಪುಟ್ಟ ದುರಸ್ತಿ ಬಿಟ್ಟರೆ ಮರು ನಿರ್ಮಾಣ ಕಾಮಗಾರಿ ನಡೆದಿಲ್ಲ. ಆದರೆ, 6 ವರ್ಷದಿಂದ ಶಾಲೆಯ ನಾಲ್ಕು ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ಯಾವುದೇ ಸಮಯದಲ್ಲಿ ಕುಸಿಯಬಹುದು ಎನ್ನುವ ಭಯದಿಂದ ವಿದ್ಯಾರ್ಥಿಗಳು ಅತ್ತ ಸುಳಿಯುತ್ತಿಲ್ಲ.
ಎರಡು ಕೋಣೆಗಳಿಗೆ ಬೀಗ ಹಾಕಲಾಗಿದೆ. ಅಲ್ಲಿಗೆ ಯಾರನ್ನೂ ಬಿಡುವುದಿಲ್ಲ. ಒಂದರಿಂದ ಏಳನೇ ತರಗತಿವರೆಗಿನ ಸುಮಾರು 78 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಇರುವ 4 ಶಿಕ್ಷಕಿಯರಿಗೆ ಶಿಥಲ ಕೊಠಡಿಗಳಿಂದ ಮಕ್ಕಳು ದೂರ ಇರುವಂತೆ ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಒಂದು ಕೊಠಡಿಯ ಮೇಲ್ಛಾವಣಿಯ ಹಲವು ಹೆಂಚುಗಳು ಕೆಳಗೆ ಬಿದ್ದಿದ್ದು, ರೀಪು, ಪಕಾಸುಗಳಿಗೆ ಗೆದ್ದಲು ಹತ್ತಿದ್ದು ಅಲ್ಲಲ್ಲಿ ತುಂಡಾಗಿದೆ. ಆರ್ಸಿಸಿ ಮೇಲ್ಛಾವಣಿ ಇರುವ ಕಟ್ಟಡಗಳು ಬಿರುಕು ಬಿಟ್ಟಿವೆ. ನಾಲ್ಕು ಕೊಠಡಿಗಳಲ್ಲಿ ಗೋಡೆಗಳಿಂದ ಮಣ್ಣು ಉದುರುತ್ತಿದೆ. ಹಾಗಾಗಿ ಜೋರಾಗಿ ಮಳೆ ಅಥವಾ ಗಾಳಿ ಬಂದಲ್ಲಿ ಇಡೀ ಶಾಲೆ ಕುಸಿದರೂ ಆಶ್ಚರ್ಯವಿಲ್ಲ.
ಈ ಶಾಲೆಯಲ್ಲಿ ಗ್ರಾಮದ ರೈತರು, ದಲಿತರು, ಕೃಷಿ ಕಾರ್ವಿುಕರು, ಹಿಂದುಳಿದ ವರ್ಗದವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಭಯದ ವಾತಾವರಣ ಸೃಷ್ಟಿಯಾಗಿದ್ದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ. ಸಮೀಪದ ಪಟ್ಟಣಗಳ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆದ್ದರಿಂದ ಒಂದು ಕಾಲದಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುತ್ತಿದ್ದ ಶಾಲೆ ಈಗ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಶಾಲೆಯ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ದಿನದೂಡುತ್ತಿದ್ದೇವೆ ಎನ್ನುತ್ತಾರೆ ಶಿಕ್ಷಕಿಯರು.
ಹಾವು ಕಂಡು ಬೆಚ್ಚಿಬಿದ್ದ ಮಕ್ಕಳು: ಶಾಲೆಯ ಉತ್ತರ ಭಾಗದಲ್ಲಿ ಕಾಂಪೌಂಡ್ ಇಲ್ಲ. ಪಕ್ಕದ ಜಮೀನಿನಲ್ಲಿ ಪಾಳುಬಿದ್ದಿದ್ದು ಅಲ್ಲಿಂದ ಹಾವು, ಚೇಳು ಸೇರಿ ಅನೇಕ ವಿಷ ಜಂತುಗಳು ಶಾಲೆಯ ಆವರಣದೊಳಗೆ ಪ್ರವೇಶ ಮಾಡುತ್ತಿವೆ. ಹಲವಾರು ಬಾರಿ ಹಾವನ್ನು ಕಂಡ ಮಕ್ಕಳು ಭಯಬೀತರಾಗಿರುವ ಘಟನೆಗಳು ಜರುಗಿವೆ. ಆದ್ದರಿಂದ ಮಕ್ಕಳ ಜೀವವನ್ನು ಹಗುರವಾಗಿ ಪರಿಗಣಿಸದೆ ಶಾಲಾಕಟ್ಟಡದ ದುರಸ್ತಿ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮದ ಉಮೇಶಗೌಡ ಪಾಟೀಲ್, ಬಿ. ಎಸ್. ಮಡಿವಾಳರ. ಬಸವರಾಜ್ ಕುರುಡಗಿ, ನಾಗರಾಜ್ ಹುಯಿಳಗೊಳ ಆಗ್ರಹಿಸಿದ್ದಾರೆ.
ಶಿಥಿಲವಾಗಿದ್ದ ಛಾವಣಿ ಕುಸಿದು 6 ವರ್ಷವಾದರು ಅನುದಾನ ಇಲ್ಲ ಎನ್ನುವ ಹಾರಿಕೆ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಇನ್ನಾದರೂ ಕಟ್ಟಡ ದುರಸ್ತಿಪಡಿಸಿ, ಮಕ್ಕಳನ್ನು ರಕ್ಷಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. |ಕಲ್ಲನಗೌಡ ಹೊನ್ನಪ್ಪಗೌಡ್ರ ಎಸ್ಡಿಎಂಸಿ ಅಧ್ಯಕ್ಷ
ರೋಣ ತಾಲೂಕಿನ ಬಿಇಒ ಆಗಿ ಒಂದು ವಾರವಾಗಿದೆ. ಬಿಆರ್ಸಿ ಅವರನ್ನು ಶಾಲೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. - ಆರ್.ಎನ್.ಹುರಳಿ ಕ್ಷೇತ್ರ ಶಿಕ್ಷಣಾಧಿಕಾರಿ, ರೋಣ