

ಮಂಡ್ಯ: ಮಕ್ಕಳಂತೆ ಜೀವನ ನಡೆಸಿದರೆ ಬದುಕಿನಲ್ಲಿ ಸಂತೋಷ ಕಾಣಲು ಸಾಧ್ಯ. ಆದ್ದರಿಂದ ನಿರಂತರ ಓದುವಿಕೆ ಅಗತ್ಯ ಎಂದು ಚಿನ್ಮಯ ಮಂದಿರದ ಆದಿತ್ಯಾನಂದ ಗುರೂಜಿ ಸಲಹೆ ನೀಡಿದರು.
ನಗರದ ಹೊರವಲಯದ ಗ್ರೀನ್ ಪ್ಯಾಲೇಸ್‌ನಲ್ಲಿ ಎಸ್.ಬಿ.ಇ.ಟಿ ಅಂಗ ಸಂಸ್ಥೆಯಾದ ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್‌ನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ತೆಂಗಿನ ಸಸಿ ವಿತರಿಸಿ ಆಶೀರ್ವಚನ ನೀಡಿದರು. ಓದುವುದು ನಿರಂತರ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಪ್ರಶ್ನೆ ಕೇಳುವ ಮನೋಭಾವ ಹೆಚ್ಚಿಸಿಕೊಳ್ಳಬೇಕು. ಯಾವ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಾರೋ ಅವರಿಗೆ ಪ್ರಾಪಂಚಿಕ ಜ್ಞಾನ ಅರಿವಾಗುತ್ತಾ ಹೋಗುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆ ಎಂಬುದರ ಅರ್ಥ ತಿಳಿಸಿಕೊಡಬೇಕು. ಕಲಿಕೆಯೊಂದಿದ್ದರೆ ತಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂಬುದನ್ನು ಶಿಕ್ಷಕರಾದವರು ಅರಿತು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕು. ಅದೇ ನಿಟ್ಟಿನಲ್ಲಿ ಪಾಲಕರ ಸಹಕಾರ ಕೂಡ ಮುಖ್ಯ ಎಂದರು.
ಎಸ್‌ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ, ನೆಹರು ಹುಟ್ಟಿದ ದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶವೇ ಮಕ್ಕಳನ್ನು ಸರಿಯಾದ ರೀತಿಯಲ್ಲಿ ರೂಪಿಸುವುದು. ದೇಶ ಕಾಪಾಡುವ ಹಾಗೂ ಸತ್ಪ್ರಜೆಯಾಗಿ ರೂಪಿಸುವುದು ತಂದೆ-ತಾಯಂದಿರ ಜವಾಬ್ದಾರಿಯಾಗಿದೆ. ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಮುಖ್ಯ ಶಿಕ್ಷಕರಾದ ಸರೋಜ, ರಾಜಣ್ಣ, ಮಾರ್ಟಿನ್ ಇದ್ದರು. ಇದೇ ಸಂದರ್ಭದಲ್ಲಿ 600 ವಿದ್ಯಾರ್ಥಿಗಳಿಗೆ ತೆಂಗಿನ ಸಸಿಗಳನ್ನು ಗಣ್ಯರು ವಿತರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.