

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಗು ಇದ್ದ ಮನೆಯಲ್ಲಿ ಸದಾ ನಗು ಇರುತ್ತದೆ. ಸಶಕ್ತ ಭಾರತ ದೇಶ ನಿರ್ಮಿಸಲು ಪರಿಪೂರ್ಣ ವ್ಯಕ್ತಿತ್ವದ ಮಕ್ಕಳನ್ನು ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಬಾಲಭವನ ಆವರಣದಲ್ಲಿ ಕರ್ನಾಟಕ ಬಾಲಭವನ ಸೊಸೈಟಿ, ಜಿಲ್ಲಾಡಳಿತದ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಶುಕ್ರವಾರ ಆಯೋಜಿಸಿದ್ದ ವಿವಿಧ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲ್ಯಾವಸ್ಥೆಯು ಜೀವನದ ಮುಖ್ಯ ಘಟ್ಟ. ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ನಮ್ಮ ಜತೆಯಲ್ಲಿರುವವರೂ ಚೆನ್ನಾಗಿರಲೆಂದು ಬಯಸಬೇಕು. ಅರಮನೆಯಲ್ಲಿದ್ದರೂ ನೆರೆಮನೆ ಚೆನ್ನಾಗಿರಬೇಕು. ಸುತ್ತಲಿರುವವರ ಒಳಿತನ್ನು ಬಯಸುವ ಹೃದಯವಂತ ಮಕ್ಕಳು ನಮ್ಮವರಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ. ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸ್ಪರ್ಧೆಗಳು ಉತ್ತಮ ವೇದಿಕೆ. ಇಂತಹ ಅವಕಾಶಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಕ್ಕಳ ಸಾಹಿತಿ ಶಂಕರ ಹಲಗತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೆಶಕಿ ಡಾ. ಎಚ್.ಎಚ್. ಕುಕನೂರ ಮಾತನಾಡಿದರು.
ಸ್ಪರ್ಧೆಯಲ್ಲಿ 9ರಿಂದ 16 ವರ್ಷದೊಳಗಿನ 185 ಮಕ್ಕಳು ಭಾಗವಹಿಸಿದ್ದರು. ವಾದ್ಯ ಸಂಗೀತ, ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ ಸ್ಪರ್ಧೆಗಳು ನಡೆದವು.
ಡಾ. ಕಮಲಾ ಬೈಲೂರ, ಕಾಂಚನಾ ಅಮಠೆ ಹಾಗೂ ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಉಪಸ್ಥಿತರಿದ್ದರು.
ಜಾನಪದ ನೃತ್ಯ ವಿಭಾಗದಲ್ಲಿ ಪ್ರೀತಿ ಗೌಡರ, ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸ್ಮೃತಿ ಮಠದ, ವಾದ್ಯ ಸಂಗೀತ ವಿಭಾಗದಲ್ಲಿ ನಮದೇವ ಕನಕೂರ ಹಾಗೂ ಸಂಜು ಹೊನ್ನಾಪುರ, ನೂತನ ಆವಿಷ್ಕಾರದ ವಿಜ್ಞಾನ ವಿಭಾಗದಲ್ಲಿ ಸಮರ್ಥಗೌಡ ಗಿರಿಯಪ್ಪಗೌಡ ಹಾಗೂ ಸ್ವಾತಿ ಅರಳಿ, ಚಿತ್ರಕಲೆ ವಿಭಾಗದಲ್ಲಿ ಸಾನ್ವಿ ಯರಗೊಪ್ಪ ಮತ್ತು ಶಿವಾಷಿ ರೇವಣಕರ ರಾಜ್ಯಮಟ್ಟದ ಮಕ್ಕಳ ಸ್ಪರ್ಧೆಗೆ ಆಯ್ಕೆಯಾದರು.