ಮಕ್ಕಳ ಶಿಬಿರಗಳು ಮನೋವಿಕಾಸಕ್ಕೆ ಸಹಕಾರಿ

Children's camps are helpful for mental development
Published on

ಹಾನಗಲ್ಲ: ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಶಿಬಿರಗಳು ಅವರ ಮನೋವಿಕಾಸಕ್ಕೆ ಸಹಕಾರಿಯಾಗಿ, ಬುದ್ಧಿಚಾತುರ್ಯಕ್ಕೆ ಉತ್ತೇಜನ ನೀಡಬಲ್ಲವು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹೇಳಿದರು.

ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಗಜಾನನ ಯುವಕ ಮಂಡಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಒಂದು ತಿಂಗಳ ಚಿಣ್ಣರ ಕಲರವ ಮಕ್ಕಳ ರಂಗಭೂಮಿ ತರಬೇತಿ ಸಮಾರೋಪ ಸಮಾರಂಭ ಹಾಗೂ ಮಕ್ಕಳ ನಾಟಕ ಪ್ರದರ್ಶನ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಒಳ್ಳೆಯ ಅಭಿರುಚಿ ಬೆಳೆಸಬೇಕಾಗಿದೆ. ಚಿತ್ರಕಲೆ, ಸಂಗೀತ, ನಾಟಕಗಳ ಆಸಕ್ತಿ ಹುಟ್ಟಿಸಬೇಕಿದೆ. ಮನರಂಜನೆಯೂ ಶಿಕ್ಷಣದ ಒಂದು ಭಾಗವಾಗಬೇಕು. ಮಕ್ಕಳ ಮನೋವಿಕಾಸಕ್ಕಿಂತ ಪುಸ್ತಕದ ಒತ್ತಡ ಹಾಕುವ ಈ ಕಾಲದಲ್ಲಿ ಮಕ್ಕಳಿಗೆ ಅವರ ಶಕ್ತಿಗನುಗುಣವಾಗಿ ಆಸಕ್ತಿ ಬೆಳೆಸುವ ಕೆಲಸ ಆಗಬೇಕಾಗಿದೆ. ಶೇಷಗಿರಿ ಮಕ್ಕಳಿಗಾಗಿ ನಡೆಸುತ್ತಿರುವ ಈ ನಾಟಕ ತರಬೇತಿ ಹಾಗೂ ಮನೋವಿಕಾಸ ಕಾರ್ಯ ಅಭಿನಂದನೀಯ ಎಂದರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಪ್ರಭು ಗುರಪ್ಪನವರ ಮಾತನಾಡಿ, 30 ವರ್ಷಗಳಿಂದ ಇಲ್ಲಿ ಮಕ್ಕಳ ರಂಗ ತರಬೇತಿ ನಡೆಯುತ್ತಿದೆ. ವ್ಯಾಯಾಮ, ಶಿಸ್ತು, ಸಂಯಮ, ಏಕಾಗ್ರತೆ, ಸ್ವಚ್ಛತೆಗಳನ್ನು ಕಲಿಸುವುದರ ಜತೆಗೆ ರಂಗಭೂಮಿ ಮೂಲಕ ಮನುಷ್ಯನಾಗುವುದರ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಇಂತಹ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಎಂದರು.

ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ಹಂಚಾಟೆ ಮಾತನಾಡಿ, ಮಕ್ಕಳ ಬಾಲ್ಯತನ ಕಸಿದುಕೊಳ್ಳುವ ಕೆಲಸ ಬೇಡ. ಆಟದಲ್ಲಿ ಪಾಠ ಹೇಳಬೇಕು. ಮನಸಿನ ಶುದ್ಧಿಗೆ ರಂಗ ಸಾಂಸ್ಕೃತಿಕ ಚಟುವಟಿಕೆ ಅಗತ್ಯ. ವ್ಯಕ್ತಿತ್ವ ರೂಪಿಸುವ ಕಾರ್ಯಕ್ಕೆ ಎಲ್ಲರ ಸಹಕಾರವಿರಬೇಕು ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಬಸವರಾಜ ಬಡೆಮ್ಮಿ, ಶಿಕ್ಷಕ ಸುಭಾಸ ಹೊಸಮನಿ, ಕಾವ್ಯಾ ಕುಲಕರ್ಣಿ, ನಾಗಪ್ಪ ಚೂರಿ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪುರ, ಸಂಗೀತ ಕಲಾವಿದ ನರಸಿಂಹ ಕೋಮಾರ, ನಿರಂಜನ ಗುಡಿ ಕಾರ್ಯಕ್ರಮದಲ್ಲಿ ಇದ್ದರು. ಪ್ರತೀಕ್ಷಾ ಕೋಮಾರ ಪ್ರಾರ್ಥನೆ ಹಾಡಿದರು. ಸಿದ್ದು ಕೊಂಡೋಜಿ ಸ್ವಾಗತಿಸಿದರು. ಪ್ರೊ.ನಾಗರಾಜ ಧಾರೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

ನಾಟಕ ಪ್ರದರ್ಶನ: ಒಂದು ತಿಂಗಳ ಕಾಲ ನಡೆದ ಮಕ್ಕಳ ರಂಗ ತರಬೇತಿಯಲ್ಲಿ ಸಾಹಿತಿ ಎಚ್.ದುಂಡಿರಾಜ ರಚನೆಯ ಅಜ್ಜಿ ಕಥೆ ನಾಟಕ ಪ್ರದರ್ಶಿಸಲಾಯಿತು. ಯುವ ರಂಗ ನಿರ್ದೇಶಕ ಸಿದ್ದು ಕೊಂಡೋಜಿ ನಿರ್ದೇಶಿಸಿದರು. ಸಹ ನಿರ್ದೇಶಕ ಹರೀಶ ಗುರಪ್ಪನವರ, ಸಣ್ಣಪ್ಪ ಹೊರವರ ಹಾಗೂ ಉದಯ ಬಡೆಮ್ಮಿ ಅವರ ವಸ್ತ್ರಾಲಂಕಾರ, ಜಮೀರ ಪಠಾಣ ಅವರ ಪ್ರಸಾದನದಲ್ಲಿ ನಾಟಕ ಪ್ರಸ್ತುತಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net