ಮಕ್ಕಳು- ಪಾಲಕರು ಮೆಚ್ಚಿದ ಎಕ್ಸ್‌ಪೋ, ಶೈಕ್ಷಣಿಕ ಪ್ರದರ್ಶನಕ್ಕೆ ಹರಿದು ಬಂದ ಜನಸಾಗರ

IMG-20240206-WA0014.jpg
Published on

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಇದೇ ಮೊದಲ ಬಾರಿ ಕನ್ನಡದ ನಂಬರ್ 1 ದಿನಪತ್ರಿಕೆ ವಿಜಯವಾಣಿ ಹಾಗೂ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿಜಯವಾಣಿ ಎಜುಕೇಷನ್ ಎಕ್ಸ್‌ಪೋ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ವಿಶೇಷವಾಗಿ ವಿದ್ಯಾರ್ಥಿ- ಪಾಲಕರ ದುಗುಡ- ದುಮ್ಮಾನಗಳನ್ನು ದೂರ ಮಾಡುವಲ್ಲಿ ಬಹಳಷ್ಟು ಯಶ ಕಂಡಿತು. ಬೆಳಗ್ಗೆಯಿಂದ ಸಂಜೆಯವರೆಗೂ ಮೇಳಕ್ಕೆ ಜನಸಾಗರ ಹರಿದು ಬಂದಿತು. ಜ್ಞಾನದಾಹ ತಣಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಭಯವನ್ನೂ ಹೋಗಲಾಡಿಸಿಕೊಂಡರು.

ಮೇಳದಲ್ಲಿ 40ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಮಳಿಗೆ ತೆರೆಯುವ ಮೂಲಕ ತಮ್ಮಲ್ಲಿರುವ ವೈವಿಧ್ಯಮಯ ಕೋರ್ಸ್, ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಎರಡು ದಿನ ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯಾರ್ಥಿಗಳು, ಪಾಲಕರು ಮಳಿಗೆಗಳನ್ನು ವೀಕ್ಷಿಸಿದರು.

ಪಾಲಕರು ತಮ್ಮ ಮಕ್ಕಳಿಗೆ ಯಾವ ಶಾಲೆ, ಕಾಲೇಜು ಉತ್ತಮ, ಯಾವ ಕೋರ್ಸ್ ಮಾಡಿದರೆ ಒಳ್ಳೆಯ ಭವಿಷ್ಯವಿದೆ ಎಂಬಿತ್ಯಾದಿ ಮಾಹಿತಿ ಪಡೆದರು. ಒಂದೇ ಸೂರಿನಡಿ ಅವಳಿನಗರ ಮಾತ್ರವಲ್ಲ, ರಾಜ್ಯದ ಬೇರೆಬೇರೆ ಕಡೆಗಳಲ್ಲಿ ಇರುವ ಶಿಕ್ಷಣ ಸಂಸ್ಥೆಗಳ ಮಾಹಿತಿ ಸಿಕ್ಕಿದ್ದರಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಖುಷಿ ಹಂಚಿಕೊಂಡರು. ಇಂತಹ ಮೇಳ ಆಯೋಜಿಸಿದ್ದ ವಿಜಯವಾಣಿಗೆ ಧನ್ಯವಾದ ಅರ್ಪಿಸಿದರು.

ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ವಿವಿಧ ಗೋಷ್ಠಿ, ಸಂವಾದಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಯಾವುದೇ ಅಳಕಿಲ್ಲದೇ ತಜ್ಞರು, ಉಪನ್ಯಾಸಕರೊಂದಿಗೆ ಮಾತನಾಡಿದರು. ಪ್ರಶ್ನೆಗಳನ್ನು ಕೇಳಿ ಸಂಶಯ ಪರಿಹಾರ ಮಾಡಿಕೊಂಡರು.

ಮಕ್ಕಳ ಮನರಂಜನೆಗೆ ಮಧ್ಯದಲ್ಲಿ ಒಂದಿಷ್ಟು ಹಾಡು, ಸಂಗೀತ ಕಾರ್ಯಕ್ರಮ, ಸಂಜೆ ಏರ್ಪಡಿಸಿದ್ದ ನಗೆ ನಾಟಕ, ಸ್ಟಾಂಡ್‌ಅಪ್ ಕಾಮಿಡಿ ಪ್ರೇಕ್ಷಕರಿಗೆ ಮುದ ನೀಡಿದವು. ಧಾರವಾಡದ ಡಿ ಮ್ಯೂಸಿಕ್ ಇವೆಂಟ್ಸ್ ತಂಡದವರ ಹಾಡುಗಳು ಕೇಳುವಂತಿದ್ದವು. ಪ್ರತಿದಿನ ಮಕ್ಕಳಿಗಾಗಿ ಮಧ್ಯಾಹ್ನ ಊಟ, ಸಂಜೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಐಐಟಿ ಪ್ರಾಧ್ಯಾಪಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು ತಮ್ಮದೇ ಆದ ಶೈಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತು ಪರೀಕ್ಷಾ ಭಯ ಹೋಗಲಾಡಿಸುವ ಪ್ರಯತ್ನ ಮಾಡಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಸದುಪಯೋಗ ಪಡೆದುಕೊಂಡರು. ವಿವಿಧ ಶಾಲೆ, ಕಾಲೇಜುಗಳ ಶಿಕ್ಷಕರು ಭಾಗವಹಿಸಿ ತಮ್ಮ ಜ್ಞಾನದ ಹರಿವು ಹೆಚ್ಚಿಸಿಕೊಂಡರು.

ಅಗಸ್ತ್ಯ ಫೌಂಡೇಷನ್‌ನವರ ವಿಶೇಷ ವಿಜ್ಞಾನ ವಸ್ತು ಪ್ರದರ್ಶನ ಮಕ್ಕಳ ಕುತೂಹಲ ಹೆಚ್ಚಿಸಿತ್ತು. ಪ್ರಯೋಗಗಳ ಮೂಲಕ ಹಲವು ವಿಷಯಗಳನ್ನು ತಿಳಿದುಕೊಂಡರು.

ಜನಪ್ರತಿನಿಧಿಗಳು ಭಾಗಿ:
ಸೋಮವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವೇದಿಕೆಯಲ್ಲಿ ಮಕ್ಕಳನ್ನು ಕರೆದುಕೊಂಡು ಮೇಳ ಉದ್ಘಾಟಿಸಿದರು. ಪುಳಕಿತರಾದ ಮಕ್ಕಳು ಸಚಿವರೊಂದಿಗೆ ಕೆಲಹೊತ್ತು ಸಂವಾದ ನಡೆಸಿದರು.

ಮಂಗಳವಾರ ಬೆಳಗ್ಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಮೇಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಸದಾ ಹೊಸತನದ ಹರಿಕಾರ ವಿಜಯವಾಣಿ ಎಕ್ಸ್‌ಪೋ ವಿನೂತನ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿದೆ. ಪಾಲಕರ ಸಂಶಯಗಳನ್ನು ದೂರ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಕಾಸಕ್ಕೆ ದಾರಿ:
ವಿವಿಧ ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದ ಪ್ರತಿಯೊಬ್ಬರೂ ಪರೀಕ್ಷಾ ಭಯ ಬಿಟ್ಟು ಮೊದಲು ಹೊರಬನ್ನಿ ಎಂದೇ ಹೇಳಿದರು. ೇಲ್ ಆದರೂ ಪರವಾಗಿಲ್ಲ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ಪ್ರಯತ್ನ ನಿರಂತರವಾಗಿರಲಿ, ಆಗಲೇ ವಿಕಾಸಕ್ಕೆ ದಾರಿ ಸಿಗುತ್ತದೆ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net